ಅಳವಂಡಿ: ಅಯೋಡಿನ್ ಅಂಶವು ಮನುಷ್ಯನ ದೈಹಿಕ, ಮಾನಸಿಕ ಬೆಳವಣಿಗೆಗೆ ಅತಿ ಅವಶ್ಯಕವಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯದ ಆಹಾರದಲ್ಲಿ ಅಯೋಡಿನ್ ಅಂಶವಿರುವ ಉಪ್ಪನ್ನೇ ಬಳಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ತಿಳಿಸಿದರು.
ಸಮೀಪದ ಹಲಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಭಾಗ್ಯನಗರ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನ್ಯತೆ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮನುಷ್ಯನಿಗೆ ಬದುಕಲು ಮುಖ್ಯವಾಗಿ ನೀರು, ಗಾಳಿ ಹಾಗೂ ಆಹಾರ ಹೇಗೆ ಮುಖ್ಯವೋ ಅಯೋಡಿನ್ ಅಂಶವಿರುವ ಉಪ್ಪಿನ ಸೇವನೆಯೂ ಅಷ್ಟೇ ಮುಖ್ಯ. ಈ ಅಂಶ ಗಜ್ಜರಿ, ಮೀನು, ಸಮುದ್ರಕಳೆ, ಸಿಗಡಿಮೀನುಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ ಎಂದು ತಿಳಿಸಿದರು.
ವಿಶೇಷವಾಗಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಮಕ್ಕಳು ಹಾಗೂ ಹದಿ-ಹರೆಯದವರು ಕಡ್ಡಾಯವಾಗಿ ಅಯೋಡಿನ್‌ಯುಕ್ತ ಉಪ್ಪನ್ನೇ ಉಪಯೋಗಿಸಬೇಕು. ಇದನ್ನು ಬಳಸದಿದ್ದಲ್ಲಿ ಗರ್ಭಿಣಿಯರಲ್ಲಿ ಪದೇ ಪದೇ ಗರ್ಭಪಾತ, ವಯಸ್ಕರಲ್ಲಿ ನಿಶಕ್ತಿ, ಗಳಗಂಡರೋಗ ಮುಂತಾದ ಕಾಯಿಲೆಗಳು ಉಂಟಾಗುತ್ತದೆ. ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಕುಂಠಿತ ಬೆಳವಣಿಗೆ, ಕಿವುಡ ಹಾಗೂ ಮೂಕತನ, ಕುಬ್ಜತನ ಕಂಡುಬರುತ್ತದೆ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೀಲಾ, ಬಾಲ್ಯವಿವಾಹ ನಿಷೇಧ, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಕೈತೊಳೆಯುವ ವಿಧಾನ ಕುರಿತು ತಿಳಿಸಿದರು.
ಕಾಲೇಜಿನ ಪ್ರಭಾರ ಪ್ರಾಚಾರ್ಯ ವೀರೇಶ ಜಿ.ಕೆ. ಮಾತನಾಡಿ, ಅಯೋಡಿನ್ ಉಪಯುಕ್ತತೆ ಬಗ್ಗೆ ವಿದ್ಯಾರ್ಥಿಗಳು ತಮ್ಮ ವಾರ್ಡ್ ಹಾಗೂ ಸುತ್ತ ಮುತ್ತಲಿನ ಮನೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಉಪನ್ಯಾಸಕರಾದ ಡಾ.ಸುಮತಿ, ಶರಣಬಸವರಾಜ, ಶರಣಪ್ಪ ಮಾಗಳದ, ಶರೀಫಾ ಬೇಗಂ, ಸಿದ್ದರೆಡ್ಡಿ ಮೇಟಿ, ಕೊಟ್ರಪ್ಪ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.