ಜಿಲ್ಲೆ

ದುಡ್ಡು ಕೊಟ್ಟು ಗೆದ್ದ ನಾಯಕರು ಎಲ್ಲಿ ಕೆಲಸ ಮಾಡ್ತಾರೆ? ವಿಶ್ರಾಂತ ನ್ಯಾಯಮೂರ್ತಿ ಪ್ರಶ್ನೆ

ಚಿಕ್ಕಬಳ್ಳಾಪುರ: ಚುನಾವಣೆಯ ಸಂದರ್ಭದಲ್ಲಿ ದುಡ್ಡು ಕೊಟ್ಟವರನ್ನು ಜನರು ಗೆಲ್ಲಿಸುತ್ತಿದ್ದಾರೆ. ಹೀಗೆ ಆಯ್ಕೆಯಾದ ಜನಪ್ರತಿನಿಧಿಗಳು ಬಂಡವಾಳ ಹೂಡಿಕೆಯ ಪರ ನೀತಿಗಳನ್ನು ರೂಪಿಸುತ್ತಾರೆ. ಬಡವರ ಪರವಾಗಿ ಎಲ್ಲಿ ಮಾಡುತ್ತಾರೆ? ಎಂದು ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅತ್ಯಾಚಾರಿಗಳು, ಶ್ರೀಮಂತ ಕುಳಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಗೆದ್ದು ಬರುತ್ತಿದ್ದಾರೆ. ಜನರು ಹಣಕ್ಕೆ ಮೈ ಮರೆತು ಅನರ್ಹರನ್ನು ಗೆಲ್ಲಿಸುತ್ತಿದ್ದಾರೆ. ಇದರಿಂದ ಆಡಳಿತ ಯಂತ್ರಾಂಗ ಹದಗೆಡುತ್ತಿದೆ. ಕಚೇರಿಗಳಲ್ಲಿ ಕರ್ತವ್ಯ ನಿರ್ವಹಣೆಗೆ ಲಂಚ, ಅನುದಾನದ ದುರುಪಯೋಗ, ಮಾರಕ ನೀತಿಗಳ ಜಾರಿ, ಕಾಪೋರ್ರೇಟ್ ಕಂಪನಿಗಳಿಗೆ ಅನುಕೂಲಕರ ನಿಲುವು, ನ್ಯಾಯಾಲಯಗಳಲ್ಲಿ ಅತ್ಯಾಚಾರಿಗಳಿಗೆ ಬೇಗ ಜಾಮೀನು ಮಂಜೂರು ಸೇರಿದಂತೆ ಹಲವು ಬೆಳವಣಿಗೆಗಳಾಗುತ್ತಿವೆ ಎಂದು ವಿಷಾದಿಸಿದ್ದಾರೆ.
ಒಳ್ಳೆಯ ಆಡಳಿತ ಯಂತ್ರಾಂಗ ವ್ಯವಸ್ಥೆ, ಒಗ್ಗಟ್ಟಿನಲ್ಲಿ ಜನರ ಕಾನೂನಾತ್ಮಕ ಹೋರಾಟಕ್ಕೆ ಸ್ಪಂದನೆ ಸಿಗುತ್ತದೆ. ಈ ನಿಟ್ಟಿನಲ್ಲಿ ಜನಪರ ನಿಲುವು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.


*ನ್ಯಾಯಾಂಗವು ಪರಿಗಣಿಸಿಲ್ಲ ಏಕೆ?
ಪರಿಶುದ್ದವಾದ ನೀರು ಪೂರೈಸುವಲ್ಲಿ ಕಡೆಗಣನೆ, ಅವೈಜ್ಞಾನಿಕ ಯೋಜನೆಗಳ ಜಾರಿಯ ಬಗ್ಗೆ ಹೋರಾಟಗಳ ನಡುವೆ ನ್ಯಾಯಾಲಯದ ಮೆಟ್ಟಿಲೇರಿದ್ದರೂ ನ್ಯಾಯ ಸಿಕ್ಕಿಲ್ಲ, ಸ್ಥಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕಿವಿ ಹಿಂಡುವ ಕೆಲಸವಾಗಿಲ್ಲ ಏಕೆ?. ಇಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ನ್ಯಾಯಾಧೀಶರ ಅರಿವಿಗೆ ಏಕೆ ಬರುತ್ತಿಲ್ಲ?.
ಇವು ನೀರಾವರಿ ಕಾರ್ಯಾಗಾರದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡರಿಗೆ ವಿವಿಧ ಸಂಘಟನೆಗಳ ಮುಖಂಡರು ಕೇಳಿದ ಪ್ರಶ್ನೆಗಳು. ಸ್ಥಳಿಯ ಸಮಸ್ಯೆಗಳ ಬಗ್ಗೆ ಅಂಕಿ ಅಂಶಗಳ ಸಮೇತ ದೂರು ಸಲ್ಲಿಸಿದಾಗ ತ್ವರಿತವಾಗಿ ವಿಚಾರಣೆ ನಡೆಸಿ, ವೈಜ್ಞಾನಿಕ ಪರಿಹಾರ ಕೆಲಸಗಳ ನಿರ್ವಹಣೆಗೆ ಏಕೆ ಕ್ರಮ ಕೈಗೊಳ್ಳಬಾರದು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗೋಪಾಲಗೌಡರು, ವಕೀಲರ ವಾದ ಮಂಡನೆಯಲ್ಲಿ ಲೋಪಗಳಿಂದ ವಿಳಂಬವಾಗುವುದರ ಜತೆಗೆ ಹಲವು ಸಮಸ್ಯೆಗಳು ಉದ್ಭವವಾಗುತ್ತವೆ ಎಂದು ತಿಳಿಸಿದರು.