ಬೆಂಗಳೂರು: ಬೆಂಗಳೂರು -ಮೈಸೂರು ಮೂಲಸೌಕರ್ಯ ಕಾರಿಡಾರ್ (ನೈಸ್)ಯೋಜನೆಗಾಗಿ ವಶಪಡಿಸಿಕೊಂಡ ರೈತರ ಭೂಮಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಏನು ಕ್ರಮ ಕೈಗೊಂಡಿದೆ(Where is the compensation for the farmers who lost land to Nice project?) ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೈಸ್ ಯೋಜನೆ ಹೆಸರಿನಲ್ಲಿ ರೈತರ ಭೂಮಿ ಲೂಟಿ ಹೊಡೆಯಲಾಗಿದೆ. ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು, ಕಾಂಗ್ರೆಸ್ ನಾಯಕರು ಎಲ್ಲ ಸೇರಿ ರೈತರ ಭೂಮಿಯನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ರೇಗಿದರು.
22 ವರ್ಷಗಳೇ ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡದ ಅಧಿಕಾರಿಗಳ ಉದಾಸೀನತೆ, ಗಾಢನಿದ್ರೆಯ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಆದರೂ ಈ ರಾಜ್ಯ ಸರ್ಕಾರ ರೈತರ ಹಿತ ಮರೆತು ಗಾಢನಿದ್ರೆಯಲ್ಲಿದೆ. ರಸ್ತೆ ಮಾಡುತ್ತೇವೆ ಎಂದು ಹೇಳಿ ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ. ಟಿ.ಬಿ.ಜಯಚಂದ್ರ ಅವರ ನೇತೃತ್ವದ ಸದನ ಸಮಿತಿ ಇಡೀ ಯೋಜನೆಯನ್ನೇ ಸರ್ಕಾರ ವಶಕ್ಕೆ ಪಡೆದು ಉನ್ನತ ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿತ್ತು. ಹಾಗಿದ್ದರೂ ಈ ಸರ್ಕಾರ ಮಗುಮ್ಮಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ತಿಂಗಳ ಒಳಗಾಗಿ ರೈತರಿಗೆ ಪರಿಹಾರ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 2019 ಏಪ್ರಿಲ್ 22ಕ್ಕೆ ಅನ್ವಯ ಆಗುವಂತೆ ರೈತರು ಕಳೆದುಕೊಂಡಿರುವ ಭೂಮಿಗೆ ಮಾರುಕಟ್ಟೆ ಮೌಲ್ಯ ನಿರ್ಧರಿಸಬೇಕು ಎಂದು ಕೋರ್ಟ್ ಆದೇಶ ಕೊಟ್ಟಿದೆ. ಸುಪ್ರೀಂ ಕೋರ್ಟ್ ಆದೇಶ ಬಂದು ಎಷ್ಟು ದಿನವಾಯಿತು. ಎಂ.ಬಿ.ಪಾಟೀಲ ಅವರೇ ಪರಿಹಾರ ಕೊಡಿಸದೆ ಏನು ಮಾಡುತ್ತೀರಿ? ಎಂದು ಕೆಣಕಿದರು.
ಕೇಂದ್ರ ಸರಕಾರದ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಐವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಮಾಡಿರುವ ತಪ್ಪುಗಳೇ ಇದಕ್ಕೆಲ್ಲ ಕಾರಣ. ನೆಹರೂ ಕಾಲದಲ್ಲಿ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ತೆರಿಗೆ ಪಾಲು ಕೊಡುವ ಪದ್ಧತಿ ಜಾರಿಗೆ ತರಲಾಗಿದೆ. ಈಗಲೂ ಅದೇ ಪದ್ಧತಿ ಆಧಾರದ ಮೇಲೆ ರಾಜ್ಯಕ್ಕೆ ತೆರಿಗೆ ಹಣವನ್ನು ಹಂಚಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.