ಜಿಲ್ಲೆ

ಎರಡು ಸಾವಿರ ರೂಪಾಯಿ ನೋಟುಗಳೆಲ್ಲಿ? ಕಪ್ಪು ಹಣ ಬಂತಾ? ಇದೇನಾ ಬಿಜೆಪಿ ಆರ್ಥಿಕ ನೀತಿ ಎಂದ ಸಚಿವ ಸಂತೋಷ ಲಾಡ್

ವಿಜಯಪುರ: ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಷಕ್ಕೆ 60 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ವರ್ಷಕ್ಕೆ 60 ಸಾವಿರ ಕೋಟಿಯಾದರೆ ಐದು ವರ್ಷಕ್ಕೆ 3 ಲಕ್ಷ ಕೋಟಿಯಾಗಲಿದ್ದು, ಇಷ್ಟು ದೊಡ್ಡ ಮೊತ್ತದ ಯೋಜನೆ ಬಡವರಿಗೆ ಕೊಡುವ ಸರ್ಕಾರ ದೇಶದಲ್ಲಿದೆಯಾ? ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.

ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಬಿಜೆಪಿಗೆ ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಕಾರ್ಪೋರೇಟ್ ವ್ಯವಸ್ಥೆ ಪರ ಇರುವ ಬಿಜೆಪಿಗರು ಬಡವರ, ಮಹಿಳೆಯರ, ದಲಿತರ ಪರ ಯೋಜನೆಗಳನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಸುಳ್ಳು ಅಭಿಪ್ರಾಯ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಕೇವಲ ಐವತ್ತು ದಿನ ಕಾಲಾವಕಾಶ ಕೊಡಿ ಕಪ್ಪು ಹಣ ಹೊರತರುತ್ತೇವೆಂದು ಹೇಳಿ ನೋಟ್‌ಬ್ಯಾನ್ ಮಾಡಿದ ಬಿಜೆಪಿಗರು ಯಾವ ಕಪ್ಪು ಹಣವನ್ನೂ ತಂದು ಬಡವರಿಗೆ ನೀಡಲಿಲ್ಲ. ಎರಡು ಸಾವಿರ ರೂಪಾಯಿ ನೋಟುಗಳು ಈಗ ಎಲ್ಲಿವೆ? ಎಂದರು.

ಆರ್‌ಬಿಐ ಗವರ್ನರ್ ಊಜಿತ್ ಪಟೇಲ್ ಅವರು, ದೇಶದಲ್ಲಿ 3 ಲಕ್ಷ ಕೋಟಿ ರೂಪಾಯಿ ಕಪ್ಪು ಹಣ ಇದೆ ಎಂದರು. ನೋಟ್ ಬ್ಯಾನ್ ಹಿನ್ನೆಲೆ ಸಾವಿರ ಕೋಟಿ ರೂಪಾಯಿ ಬ್ಯಾಂಕ್‌ಗಳಿಗೆ ಹೋಯಿತು. ಅದರಲ್ಲಿ ಕಪ್ಪು ಹಣ ಎಷ್ಟಿತ್ತು? ಬಡವರಿಗೆ ಬಂತಾ? ಎಂದರಲ್ಲದೇ, ಬಡವರ ಒಂದು ರೂಪಾಯಿ ಸಾಲ ಮನ್ನಾ ಮಾಡದ ಬಿಜೆಪಿ ದೊಡ್ಡ ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡಿತು. ರೈತರು, ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಬಿಜೆಪಿ ಕಾರ್ಪೋರೇಟ್ ಸಂಸ್ಥೆಗಳ 16.05 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ವ್ಯಂಗ್ಯವಾಡಿದರು.

ಸೆಂಡಿಗೆ ಮೇಲೂ ಜಿಎಸ್‌ಟಿ ಹಾಕಿದ ಬಿಜೆಪಿ ಸರ್ಕಾರ ಹಾಲು, ತುಪ್ಪ ಯಾವುದೇ ದಿನಬಳಕೆ ವಸ್ತುಗಳನ್ನೂ ಬಿಡದೇ ತೆರಿಗೆ ವಿಧಿಸಿದರು. ಶೇ. 60ರಷ್ಟು ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ಕಟ್ಟಿದರು. ಆದರೆ, ದೊಡ್ಡ ದೊಡ್ಡ ಉದ್ಯಮಿಗಳ ಸುಮಾರು 11 ಲಕ್ಷ ಕೋಟಿ ತೆರಿಗೆ ಹಣ ಉಳಿಸಿದ ಬಿಜೆಪಿ ಸರ್ಕಾರ ಬಡವರ ಪರ ಅಲ್ಲವೆಂಬುದನ್ನು ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದರು.