ನಂಜನಗೂಡು: ರೈತರ ಜೀವನಾಡಿಯಾದ ಕಬಿನಿ ಅಣೆಕಟ್ಟೆ ಹಿನ್ನೀರಿನಲ್ಲಿ ರಾಜಕೀಯ ಪ್ರೇರಿತ ವ್ಯಕ್ತಿಗಳು ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿಕೊಂಡಿದ್ದು, ಇವುಗಳಿಗೆ ಕಡಿವಾಣ ಹಾಕುವುದು ಯಾವಾಗ ಎಂದು ಹಿರಿಯ ಹೋರಾಟಗಾರ ಹೊನ್ನೂರು ಪ್ರಕಾಶ್ ಪ್ರಶ್ನಿಸಿದರು.
ತಾಲೂಕಿನ ದೇಬೂರು ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕಬಿನಿ ಅಣೆಕಟ್ಟೆ ರೈತರ ಜೀವನಾಡಿಯಾಗಿದೆ. ರೈತರಿಗೆ ಸಕಾಲದಲ್ಲಿ ನೀರು ಹರಿಸದೆ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ಆದರೆ, ಅಕ್ರಮವಾಗಿ ಕಟ್ಟಿಕೊಂಡಿರುವ ರೆಸಾರ್ಟ್ ಹಾಗೂ ವಿದ್ಯುತ್ ಉತ್ಪಾದನೆ ಕಂಪನಿಗೆ ವಿನಾಕಾರಣ ನೀರು ಹರಿಸಿ ಪೋಲು ಮಾಡುತ್ತಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಮೌನವಹಿಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ರೈತರಿಂದ ಕಬ್ಬು ಖರೀದಿ ಮಾಡಿ ಸಕ್ಕರೆ ತಯಾರು ಮಾಡುವ ಕಾರ್ಖಾನೆಗಳು ಸಾಮಾನ್ಯ ಜನರಿಗೂ ಒಂದೇ ಬೆಲೆ, ಸಕ್ಕರೆಯಿಂದ ಉತ್ಪನ್ನ ಮಾಡುವ ಕಾರ್ಖಾನೆಗಳಿಗೂ ಒಂದೇ ಬೆಲೆ ನಿಗದಿ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಮದ್ಯಸಾರ ಘಟಕಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಆರೋಪಿಸಿದರು.
ಬಳಿಕ ಸಂಘದ ಅಧ್ಯಕ್ಷ ಹಾಡ್ಯ ರವಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಇಡೀ ದೇಶವೇ ಬಂದ್ ಆಗಿತ್ತು. ಆ ಸಂದರ್ಭದಲ್ಲಿ ರೈತರು ಮಾತ್ರ ಕೋವಿಡ್ ಲೆಕ್ಕಕ್ಕೆ ತೆಗೆದುಕೊಳ್ಳದೆ ತಮ್ಮ ಕೆಲಸದಲ್ಲಿ ನಿರತರಾಗಿ ಇಡೀ ದೇಶಕ್ಕೆ ಆಹಾರವನ್ನು ಪೂರೈಕೆ ಮಾಡಿದ್ದರು. ಅರಣ್ಯ ಪ್ರದೇಶದ ಭಾಗಗಳಲ್ಲಿ ಈಗಲೂ ರೈತರು ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಬೆಳೆಗಳನ್ನು ಉಳಿಸಿಕೊಳ್ಳಲಾಗದೆ, ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳು ರೈತರ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಮುದ್ದಹಳ್ಳಿ ಚಿಕ್ಕ ಸ್ವಾಮಿ, ದೇವಿರಮ್ಮನಹಳ್ಳಿ ನಂದೀಶ್, ಅಂಬಳೆ ಮಹದೇವಸ್ವಾಮಿ, ಹಂಡುವಿನಹಳ್ಳಿ ಮರಿಸ್ವಾಮಿ, ಸಿದ್ದರಾಜು, ತಾಯಿ ಮುತ್ತಮ್ಮ, ಕೊಂತಯ್ಯನ ಹುಂಡಿ ಮಹೇಶ್, ಮಹೇಂದ್ರ, ಸಿದ್ದಪ್ಪ, ಉಮೇಶ್, ನಂಜುಂಡಿ, ಗುರುಸಿದ್ದಪ್ಪ, ಪಾಪಣ್ಣ, ಪರಶಿವಮೂರ್ತಿ, ಚಿಕ್ಕರಾಜು ಮತ್ತಿತರರು ಇದ್ದರು.