ವಿಜಯವಾಣಿ ವಿಶೇಷ ಲಕ್ಷ್ಮೇಶ್ವರ
ಬೆಂಬಲ ಬೆಲೆ ಯೋಜನೆಯಡಿ ಕುಸುಬೆ ಖರೀದಿಗೆ ಸರ್ಕಾರವು ಮೇ 16ರಂದು ಆದೇಶಿಸಿದ್ದರೂ ಇದುವರೆಗೆ ಗದಗ ಜಿಲ್ಲೆಯಲ್ಲಿ ಖರೀದಿ ಪ್ರಾರಂಭಿಸಿಲ್ಲ.
ಪ್ರಸಕ್ತ ವರ್ಷ ಮುಕ್ತ ಮಾರುಕಟ್ಟೆಯಲ್ಲಿ ಕುಸುಬೆ ದರ ಕುಸಿದಿದ್ದರಿಂದ ಮೊದಲ ಬಾರಿಗೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಆದೇಶಿಸಲಾಗಿದೆ. ಪ್ರತಿ ಕ್ವಿಂಟಾಲ್‌ಗೆ 5650 ರೂ. ನಿಗದಿಪಡಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಕುಸುಬೆ ದರ ಪ್ರತಿ ಕ್ವಿಂಟಾಲ್‌ಗೆ 3500 ರಿಂದ 4200 ರೂ.ವರೆಗಿತ್ತು. ರೈತರ ಆಗ್ರಹಕ್ಕೆ ಮಣಿದ ಸರ್ಕಾರ ಬೆಂಬಲ ಬೆಲೆ ಘೋಷಿಸಿತು. ಆದರೆ, ಟೆಂಡರ್ ಪಡೆದವರು ಖಾಲಿ ಚೀಲ ನೀಡಿಲ್ಲ, ತಂತ್ರಾಂಶ ರೂಪಿಸುವಲ್ಲಿ ವಿಳಂಬವಾಗಿದೆ ಎಂದು ದಿನ ದೂಡಲಾಗುತ್ತಿದೆ.
ಸರ್ಕಾರದ ಆದೇಶದಲ್ಲಿ 45 ದಿನಗಳವರೆಗೆ ನೋಂದಣಿಗೆ ಅವಕಾಶ ಜತೆಗೆ ಖರೀದಿ ಪ್ರಾರಂಭಿಸಬೇಕು. ಒಟ್ಟು 90 ದಿನಗಳಲ್ಲಿ (ಆ.13) ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದಿದೆ. ಆದರೆ, ಈಗಾಗಲೇ 60 ದಿನ ಕಳೆದಿದೆ.
ಹಿಂಗಾರಿನ ಕುಸುಬೆ ಫಸಲು ಜನವರಿ ತಿಂಗಳಲ್ಲಿ ರೈತರ ಕೈ ಸೇರುತ್ತದೆ. ಈ ವೇಳೆ ಮುಕ್ತ ಮಾರುಕಟ್ಟೆಯಲ್ಲಿ ಕುಸುಬೆ ದರ 4000 ರೂ.ಗಿಂತ ಕಡಿಮೆ ಇದ್ದರೂ ಬಹುತೇಕ ರೈತರು ಅನಿವಾರ್ಯ ಕಾರಣಗಳಿಂದ ಮಾರಾಟ ಮಾಡಿದ್ದರು. ಆದರೆ, ಬೆಲೆ ಬರುತ್ತದೆ ಎಂದು ಕಾಯ್ದಿಟ್ಟ ಒಂದಷ್ಟು ರೈತರಿಗೆ ಹಾಗೂ ಕೆಲ ವ್ಯಾಪಾರಸ್ಥರಿಗೆ ಬೆಂಬಲ ಬೆಲೆ ಆದೇಶ ಖುಷಿ ನೀಡಿತ್ತು. ಕುಸುಬೆ ಮಾರಾಟ ಮಾಡಿ ಮುಂಗಾರಿನ ಬಿತ್ತನೆ, ಬ್ಯಾಂಕಿನ ಸಾಲ ಮರುಪಾವತಿ ಸೇರಿ ಅಗತ್ಯತೆ ಪೂರೈಸಿಕೊಳ್ಳಬೇಕೆಂಬ ರೈತರಿಗೆ ಬೆಂಬಲ ಬೆಲೆ ಆಸರೆಯಾಗಲೇ ಇಲ್ಲ.
ಲಕ್ಷ್ಮೇಶ್ವರ, ಶಿರಹಟ್ಟಿ, ಗದಗ, ರೋಣ, ನರಗುಂದ ತಾಲೂಕುಗಳಲ್ಲಿ ಹೆಚ್ಚಾಗಿ ಕುಸುಬೆ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ 8200 ಹೆಕ್ಟೇರ್ ಕ್ಷೇತ್ರದಲ್ಲಿ ಅಂದಾಜು 1 ಲಕ್ಷ ಕ್ವಿಂಟಾಲ್ ಕುಸುಬೆ ಬೆಳೆಯಲಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರ, ಗದಗನ ಹೊಂಬಳ, ಬಳಗಾನೂರ, ರೋಣದ ಅಬ್ಬಿಗೇರಿ, ನಿಡಗುಂದಿ, ಸೂಡಿ ಕೇಂದ್ರಗಳು ಸೇರಿ ಒಟ್ಟು 1100 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ನರಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ, ಮುಂಡರಗಿ ಭಾಗದಲ್ಲಿ ಖರೀದಿ ಕೇಂದ್ರವಿಲ್ಲ.
ಖಾಲಿ ಚೀಲ ಮತ್ತು ತಂತ್ರಾಂಶ ಅಳವಡಿಸುವಲ್ಲಿ ವಿಳಂಬಾವಾಗಿತ್ತು. ಇದೀಗ ಖಾಲಿ ಚೀಲ ಬಂದಿವೆ ಮತ್ತು ತಂತ್ರಾಶವನ್ನೂ ಅಳವಡಿಸಿ ತರಬೇತಿ ನೀಡಲಾಗಿದೆ. ಹೊಂಬಳದಲ್ಲಿ ಬುಧವಾರವೇ ಖರೀದಿ ಪ್ರಾರಂಭಿಸಲಾಗಿದ್ದು, ಎರಡ್ಮೂರು ದಿನಗಳಲ್ಲಿ ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ಖರೀದಿ ಪ್ರಾರಂಭಿಸಲಾಗುವುದು.ಕೃಷ್ಣಾರೆಡ್ಡಿ ಮೇಟಿ, ಕೆಒಎಫ್ ಜಿಲ್ಲಾ ಸಹಾಯಕ ವ್ಯವಸ್ಥಾಪಕ ಬೆಂಬಲ ಬೆಲೆಯಡಿ ಖರೀದಿ ಯೋಜನೆ ಘೋಷಣೆಗೆ ಮಾತ್ರ ಸೀಮಿತವಾದಂತಾಗುತ್ತಿದೆ. ಮಳೆ ಕೊರತೆ ನಡುವೆ ಕಡಿಮೆ ಇಳುವರಿಯಿಂದ ನಷ್ಟದಲ್ಲಿದ್ದರೂ ಉತ್ತಮ ಬೆಲೆಗಾಗಿ ಏಳೆಂಟು ತಿಂಗಳು ಕಾಯುವ ಪರಿಸ್ಥಿತಿಗೆ ಸರ್ಕಾರ ರೈತರನ್ನು ತಳ್ಳಿದೆ. ಆದಷ್ಟು ಬೇಗ ಖರೀದಿ ಪ್ರಾರಂಭಿಸಿ ರೈತರ ಖಾತೆಗೆ ಹಣ ಜಮೆ ಮಾಡಬೇಕು.ಚನ್ನಪ್ಪ ಷಣ್ಮುಖಿ, ಬಸವರಾಜ ಮೆಣಸಿನಕಾಯಿ, ಬಾಪುಗೌಡ ಭರಮಗೌಡ್ರ-ರೈತರು.