ಜಿಲ್ಲೆ

ಕನ್ನಡವೇ ಪ್ರಧಾನವಾದಾಗ ಇಡೀ ಸಮಾಜವೇ ಕನ್ನಡಮಯ: ನಾಡೋಜ ಡಾ.ಮಲ್ಲೇಪುರಂ ಜಿ.ವೆಂಕಟೇಶ್

ಮೈಸೂರು: ಕನ್ನಡವೇ ಪ್ರಧಾನವಾದಾಗ ನಾವು ಬದುಕುವ ಇಡೀ ಸಮಾಜವೇ ಕನ್ನಡಮಯವಾಗುತ್ತದೆ. ಜತೆಗೆ ಕನ್ನಡ ಪ್ರಾಧ್ಯಾನತೆ ಪಡೆದು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಲಲಿತ ಕಲೆ, ಆಟೋಟಗಳಲ್ಲಿ ಕನ್ನಡಮಯತೆ ಎದ್ದು ಕಾಣುತ್ತದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ನಾಡೋಜ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು.

ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಮೈಸೂರು ಸಾಂಸ್ಕೃತಿಕ ಉತ್ಸವ’ದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕನ್ನಡ ಒಬ್ಬೊಬ್ಬರ ಬಾಯಲ್ಲೂ ಒಂದೊಂದು ರೀತಿಯಲ್ಲಿ ನುಡಿಯಲ್ಪಡುತ್ತದೆ. ಎಷ್ಟೋ ಸಿನಿಮಾ ನಟ-ನಟಿಯರು ಕನ್ನಡದಲ್ಲಿ ಆಗಿಹೋಗಿದ್ದಾರೆ. ಆದರೆ ಡಾ.ರಾಜಕುಮಾರ್ ಅವರು ಕನ್ನಡ ನುಡಿಯುತ್ತಿದ್ದ ರೀತಿ ಮಾತ್ರ ಅನನ್ಯ. ಆ ರೀತಿ ನುಡಿಯಲು ಇನ್ಯಾವ ನಟರಿಗೂ ಸಾಧ್ಯವಿಲ್ಲ. ಸಾಹಿತಿಗಳಲ್ಲೂ ಅನಕೃ ಅವರ ರೀತಿಯಲ್ಲಿ ಕನ್ನಡ ಭಾಷಣ ಮಾಡಿದವರು ಅಪರೂಪ. ಅವರೆಲ್ಲ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಬೆಳಗಿಸಿದವರು ಎಂದರು.

ಸರ್ಕಾರ ಎಲ್ಲರನ್ನೂ, ಎಲ್ಲ ಕ್ಷೇತ್ರದವರನ್ನು ಗುರುತಿಸಲು ಖಂಡಿತವಾಗಿ ಸಾಧ್ಯವಿಲ್ಲ. ಆದರೆ ಯಾರನ್ನು ಸರ್ಕಾರ ಗುರುತಿಸಲು ವಿಫಲವಾಗುತ್ತದೆಯೋ ಅಂತಹ ಎಲೆಮರೆಯ ವಿವಿಧ ಕ್ಷೇತ್ರದ ಸಾಧಕರನ್ನು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸುತ್ತವೆ, ಇದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಡು, ಭಾಷೆ ಕಟ್ಟುವ ಕೆಲಸ, ಸಂಸ್ಕೃತಿ ನಿರ್ಮಾಣ ಮಾಡುವ ಕಾರ್ಯ ಸಮಾಜಕ್ಕೆ ಒಂದು ಧೈರ್ಯ ಸ್ಥೈರ್ಯ ನೀಡುತ್ತದೆ. ಆಗ ಕುವೆಂಪು ಹೇಳಿದಂತೆ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗುತ್ತೇವೆ. ಜತೆಗೆ ಆತ್ಮಶಕ್ತಿ ಬೆಳೆಯುತ್ತದೆ. ಆತ್ಮಶ್ರೀಯೆಂದರೆ ತನ್ನನ್ನೇ ತಾನು ಜಯಿಸಿಕೊಳ್ಳುವುದು. ತನ್ನಲ್ಲಿ ತಾನೇ ಧೀರತ್ವವನ್ನು ರೂಪಿಸಿಕೊಳ್ಳುವುದು ಎಂದು ನುಡಿದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಸತೀಶ್ ಜವರೇಗೌಡ ಮಾತನಾಡಿ, ಕನ್ನಡದ ಬೆಳವಣಿಗೆ ಮತ್ತು ವಿಕಾಸ ಭಾಷೆ ಮತ್ತು ಸಾಹಿತ್ಯದಲ್ಲಿ ಮಾತ್ರವಿಲ್ಲ. ಅದು ಸಂಸ್ಕೃತಿ, ಜಾನಪದ, ವಿಜ್ಞಾನ, ತಂತ್ರಜ್ಞಾನ, ರಂಗಭೂಮಿ, ಸಂಗೀತ ಎಲ್ಲದರಲ್ಲೂ ಅಡಕವಾಗಿದೆ. ಆದ್ದರಿಂದ, ಈ ಎಲ್ಲ ಕ್ಷೇತ್ರಗಳು ಬೆಳೆದಾಗ ಕನ್ನಡ ಸಹ ವಿಸ್ತಾರವಾಗುತ್ತದೆ ಎಂದರು.

ಸಮಾರಂಭ ಉದ್ಘಾಟಿಸಿದ ದಕ್ಷ ಕಾಲೇಜಿನ ಅಧ್ಯಕ್ಷ ಪಿ.ಜಯಚಂದ್ರ ರಾಜು ಮಾತನಾಡಿ ಶಿಕ್ಷಣ, ಸಂಘಟನೆ ಮತ್ತು ಸೇವೆ ನಿರಂತರವಾಗಿ ನಡೆಯಬೇಕು. ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ ಶುಭ ಕೋರಿದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಉಪಾಧ್ಯಕ್ಷ ಕೆ.ಎಸ್.ಸತೀಶ್ ಕುಮಾರ್, ಚಿತ್ರನಟಿ ಭೂಮಿಕಾ, ಗಾಯಕಿ ಜಯಂತಿ ಭಟ್, ಆತ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ವರಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಡಾ.ಗುಣವಂತ ಮಂಜು ಇತರರು ಇದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಾಗರಾಜ್ ವಿ.ಬೈರಿ ಅವರಿಗೆ ‘ಕರ್ನಾಟಕ ಸುಪುತ್ರ ರಾಜ್ಯ ಪ್ರಶಸ್ತಿ’, ಹಿರಿಯ ಸಾಹಿತಿ ನಾಡೋಜ ಮಲ್ಲೇಪುರಂ ಜಿ.ವೆಂಕಟೇಶ್, ಶಿಕ್ಷಕ ಮತ್ತು ಕವಿ ಟಿ.ಸತೀಶ್ ಜವರೇಗೌಡ ಅವರಿಗೆ ‘ಶಿಕ್ಷಣ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ನೃತ್ಯ ಮತ್ತು ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.