ಬಂಗಾರಪೇಟೆ: ಮಳೆ ಪ್ರಾರಂಭವಾದರೆ ಸಾಕು ತಗ್ಗು ಪ್ರದೇಶಗಳಲ್ಲಿರುವ ಜನವಸತಿ ಪ್ರದೇಶದಲ್ಲಿ ಆತಂಕ ಎದುರಾಗುತ್ತದೆ. ಜೋರು ಮಳೆ ಬಂದರೆ ಪಟ್ಟಣದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಸಮಸ್ಯೆ ಇಂದು ನಿನ್ನೆಯದಲ್ಲ, ಹಲವು ವರ್ಷಗಳಿಂದ ಎದುರಿಸುಕೊಂಡು ಬರುತ್ತಿದ್ದು, ಸಮಸ್ಯೆಗೆ ಮುಕ್ತಿ ಸಿಗದಂತಾಗಿದೆ.
ಪುರಸಭೆ ವ್ಯಾಪ್ತಿಯ ಸೇಟ್ ಕಾಂಪೌಂಡ್ನ ತಗ್ಗು ಪ್ರದೇಶದ ನಾಗರಿಕರು ಈ ಸಮಸ್ಯೆ ಎದುರಿಸುತ್ತಿದ್ದು,ಈ ಭಾಗದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಚರಂಡಿ ಮೂಲಕ ಹಾದು ಹೋಗಲು ಸಾಧ್ಯವಾಗದೆ ಮನೆಗಳಿಗೆ ನುಗ್ಗಿ ಅವಾಂತರ ಜತೆಗೆ ಆತಂಕ ಉಂಟು ಮಾಡುತ್ತಿದೆ.
ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಸಂಜೆ 5.30ಕ್ಕೆ ಸಣ್ಣದಾಗಿ ಆರಂಭಗೊಂಡ ಮಳೆಯಿಂದ ರಾತ್ರಿ 8 ಗಂಟೆವರೆಗೆ ಭರ್ಜರಿಯಾಗಿ ಸುರಿದು ಇದ್ದಕ್ಕಿದ್ದಂತೆ ಮನೆಗಳಿಗೆ ನುಗ್ಗಿ ತನ್ನ ಪ್ರಭಾವ ಪರಿಚಯಿಸಿದ್ದರಿಂದ ರಾತ್ರಿಇಡೀ ಮನೆಯವರು ನೀರನ್ನು ಹೊರಗಡೆ ಎತ್ತಿ ಹಾಕುವುದೇ ಕೆಲಸವಾಗಿತ್ತು. ಚರಂಡಿ ನೀರು ಮಿಶ್ರದೊಂದಿಗೆ ನುಗ್ಗಿದ ನೀರಿನಿಂದ ಗಲೀಜು ಮನೆಯಲ್ಲಾ ಹರಡಿ, ವಸ್ತುಗಳು ಮಳೆ ನೀರಿಗೆ ನೆನೆದು ಹಾಳಾಗಿದೆ.
ಪುರಸಭೆ ಅಧ್ಯಕ್ಷರ ಭೇಟಿ ,ಪರಿಶೀಲನೆ: ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದ ಸೇಟ್ ಕಾಂಪೌಂಡ್ಗೆ ಪುರಸಭೆ ಅಧ್ಯಕ್ಷ ಗೋವಿಂದ ನೇತೃತ್ವದಲ್ಲಿ ಸಿಬ್ಬಂದಿ ರಾತ್ರೋರಾತ್ರಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಚರಂಡಿ ಬ್ಲಾಕೇಜ್ ತೆರುವುಗೊಳಿಸಿದರು. ಆದರೆ ಸದ್ಯಕ್ಕೆ ಈ ಸಮಸ್ಯೆ ನಿವಾರಣೆ ಆಗುತ್ತದೆ. ಶಾಶ್ವತ ಪರಿಹಾರ ಕಂಡುಕೊಂಡು ಮುಂದೆ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಚರಂಡಿಗಳು ಬ್ಲಾಕ್
ಮಳೆ ಬೀಳುವ ಮುನ್ನವೇ ಪುರಸಭೆ ಎಚ್ಚೆತ್ತುಕೊಂಡು ಚರಂಡಿಯಲ್ಲಿ ಬಿದ್ದಿರುವ ಕಸ ಎತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮಳೆ ನೀರು ಮನೆಗೆ ನುಗ್ಗಲು ಚರಂಡಿ ನಿರ್ವಹಣೆ ಇಲ್ಲದೆ ಇರುವುದು ಮೂಲ ಕಾರಣವಾಗಿದೆ. ಅತ್ತ ಚರಂಡಿ ಬ್ಲಾಕ್ ಆಗಿದ್ದು, ಇತ್ತ ರಸ್ತೆ ಮೇಲೆ ಹರಿದು ಮುಂದೆ ಹೋಗಲು ಸ್ಥಳದ ಕೊರತೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಮಳೆಗಾಲದ ಆರಂಭದಲ್ಲೇ ಹೀಗಾದರೆ ಮಳೆಯ ಆರ್ಭಟದಲ್ಲಿ ಬಡಾವಣೆ ಜನರ ಪರಿಸ್ಥಿತಿ ಹೇಳ ತೀರದು ಎಂದು ಸ್ಥಳಿಯ ನಿವಾಸಿಯೊಬ್ಬರು ಅಸಮಾಧಾನ ಹೊರ ಹಾಕಿದರು.
ಪ್ರತಿ ವರ್ಷವೂ ಇದೇ ಕರ್ಮ
ಪ್ರತಿ ವರ್ಷ ಮಳೆ ಬಂದಾಗ ತಗ್ಗು ಪ್ರದೇಶದ ನಿವಾಸಿಗಳು ಮಳೆಯಿಂದ ಸಮಸ್ಯೆ ಎದುರಿಸಿಕೊಂಡು ಬರುತ್ತಿದ್ದಾರೆ. ಅವಾಂತರ ಸೃಷ್ಟಿ ಆಗುವಾಗ ಮಾತ್ರ ಜನಪ್ರನತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆೆ ಭೇಟಿ ನೀಡಿ, ಆ ಸಮಯಕ್ಕೆ ಬ್ಲಾಕ್ ಆಗಿರುವ ಚರಂಡಿಯನ್ನು ಜೆಸಿಬಿ ಯಂತ್ರದಿಂದ ತೆರುವು ಕಾರ್ಯನಿರ್ವಹಿಸಿ ನೀರು ಹರಿದು ಹೋಗಲು ಕ್ರಮ ತೆಗೆದುಕೊಳ್ಳುತ್ತಾರೆ. ನಂತರದಲ್ಲಿ ಯಾರೂ ಇತ್ತ ತಲೆ ಹಾಕುವುದಿಲ್ಲ ಅನ್ನೋದು ನಿವಾಸಿಗಳ ಆರೋಪವಾಗಿದೆ.
ರಾತ್ರಿ ಸುರಿದ ಮಳೆಯಿಂದಾಗಿ ಇಲ್ಲಿನ ನಿವಾಸಿಗಳ ಮನೆಗಳಿಗೆ ನೀರಿನ ಜತೆ ಚರಂಡಿ ನೀರು ನುಗ್ಗಿ ಅವಾಂತರ ಉಂಟು ಮಾಡಿದೆ. ಮಳೆಗಾಲದಲ್ಲಿ ಪ್ರತಿವರ್ಷ ಇದೇ ಸಮಸ್ಯೆ ಎದುರಿಸಿಕೊಂಡು ಬರುತ್ತಿದ್ದೇವೆ. ವೃದ್ಧರು, ಮಕ್ಕಳು, ಮಹಿಳೆಯರು ಇದರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಘಟನೆ ನಡೆದಾಗ ಮಾತ್ರ ಎಲ್ಲರೂ ಬಂದು ಧೈರ್ಯ ತುಂಬಿ ಸಮಸ್ಯೆ ಎದುರಾಗದಂತೆ ಕ್ರಮ ಜರುಗಿಸುವುದಾಗಿ ಹೇಳಿ ಹೋಗುತ್ತಾರೆ. ಆದರೆ ಏನು ಆಗಿಲ್ಲ, ಈ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಣೆ ಮಾಡಬೇಕು.
> ಮಣಿಕಂಠನ್
ಸೇಟ್ ಕಾಂಪೌಂಡ್ ನಿವಾಸಿ, ಬಂಗಾರಪೇಟೆ