ವಿಜಯವಾಣಿ ವಿಶೇಷ ಹುಬ್ಬಳ್ಳಿ: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಒಂದು ವರ್ಷ ಆಗಿದೆ. ಆದರೆ, ಇದುವರೆಗೆ ಲಿಖಿತ ಪರೀಕ್ಷೆ ನಡೆಸದೇ ಇರುವುದರಿಂದ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) 411 ಪಿಎಸ್ಐ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. 2021ರ ಏಪ್ರಿಲ್ 1ರಿಂದ ಮೇ 3ರವರೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಆಗಸ್ಟ್ನಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನೂ ಮುಗಿಸಿದೆ. ಆದರೆ, ಇದುವರೆಗೆ ಲಿಖಿತ ಪರೀಕ್ಷೆ ನಡೆಸಿಲ್ಲ. ವಿಳಂಬಕ್ಕೆ ಕಾರಣವನ್ನೂ ಹೇಳುತ್ತಿಲ್ಲ ಎಂದು ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 411 ಪಿಎಸ್ಐ ಹುದ್ದೆಗಳ ಪೈಕಿ ಅನುಚ್ಛೇದ 371 ಜೆ ಮೀಸಲಾತಿ (26ಹುದ್ದೆ), ಮಿಕ್ಕುಳಿದ ವೃಂದ (376 ಹುದ್ದೆ), 371ಜೆ ಒಂದು ಹುದ್ದೆ ಸೇರಿ 9 ಕ್ರೀಡಾಪಟುಗಳಿಗೆ (ಶೇ. 2 ಮೀಸಲಾತಿ) ಹುದ್ದೆಗಳನ್ನು ನಿಗದಿಪಡಿಸಲಾಗಿತ್ತು. ಮೊದಲೆಲ್ಲ ನೇಮಕಾತಿ ಪ್ರಕ್ರಿಯೆ 5 ತಿಂಗಳೊಳಗೆ ಮುಗಿಸುತ್ತಿದ್ದರು. ಈಗ ವರ್ಷ ಆಗುತ್ತಾ ಬಂದರೂ ಲಿಖಿತ ಪರೀಕ್ಷೆ ನಡೆಸಿಲ್ಲ. ಜನವರಿ 30 ಮತ್ತು ಫೆಬ್ರವರಿ ಕೊನೆಯ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಕೆಎಸ್ಪಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿತ್ತಾದರೂ ಇನ್ನೂ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ.
ಅರ್ಜಿ ಸಲ್ಲಿಸಿ ಒಂದು ವರ್ಷ ಆಗುತ್ತ ಬಂದಿದೆ. ಇದುವರೆಗೆ ಲಿಖಿತ ಪರೀಕ್ಷೆ ನಡೆಸಿಲ್ಲ. ಪಿಎಸ್ಐ ಆಗಬೇಕೆಂಬ ಕನಸು ನನಸಾಗುತ್ತಿಲ್ಲ. ಒಂದು ಪರೀಕ್ಷೆ ನಡೆಸಲು ಒಂದು ವರ್ಷ ತೆಗೆದುಕೊಳ್ಳಲಾಗುತ್ತಿದೆ. ಬೇರೆ ಹುದ್ದೆಗಳಿಗೆ ಪರೀಕ್ಷೆ ಬರೆಯಲೂ ಮನಸ್ಸು ಬರುತ್ತಿಲ್ಲ. | ನೊಂದ ಅಭ್ಯರ್ಥಿಗಳು