ಮಂಜುನಾಥ ತಿಮ್ಮಯ್ಯ ಮೈಸೂರು
ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಮೂಡಿಸುವ ‘ದಸರಾ ವೈಮಾನಿಕ ಪ್ರದರ್ಶನ’ಕ್ಕೆ ಇನ್ನೂ ಮೂರ್ತ ರೂಪ ದೊರೆತಿಲ್ಲ. ಪೂರ್ವಸಿದ್ಧತಾ ಕೆಲಸಗಳಿಗೂ ಚಾಲನೆ ದೊರೆತಿಲ್ಲ!
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಏಳು ದಿನಗಳು ಮಾತ್ರ ಬಾಕಿ ಉಳಿದಿದೆ. ಏರ್ ಶೋ ಕುರಿತು ಪ್ರಕ್ರಿಯೆಗಳು ನಡೆಯುತ್ತಿಲ್ಲ. ಇದು ಸಾಹಸಮಯ ಪ್ರದರ್ಶನ ಕಣ್ತುಂಬಿಕೊಳ್ಳಲು ಕಾತರದಲ್ಲಿದ್ದ ಜನರಿಗೆ ನಿರಾಶೆ ಭಾವ ಮೂಡಿಸಿದೆ.
ಜಿಲ್ಲಾಡಳಿತ, ಭಾರತೀಯ ವಾಯುಪಡೆ ವತಿಯಿಂದ ನಡೆಯುವ ವೈಮಾನಿಕ ಪ್ರದರ್ಶನ ದಸರಾದ ಪ್ರಮುಖ ಆಕರ್ಷಣೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಲಾಗುತ್ತದೆ. ಆದರೆ ಈ ಸಲ ಈ ಕುರಿತು ಸದ್ದೇ ಇಲ್ಲವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರದರ್ಶನ ಕುರಿತು ಆಸಕ್ತಿ ತೋರುತ್ತಿದ್ದು, ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟ ದಸರಾ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಏರ್ ಶೋಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿ ಸ್ವಲ್ಪ ಹೆಚ್ಚಿನ ಸಮಯ ಏರ್ ಶೋ ನಡೆಸಲೂ ವಿನಂತಿಸಿಕೊಳ್ಳಲಾಗುವುದು. ಜಿಲ್ಲಾಡಳಿತ ಈ ಕುರಿತು ಸಿದ್ಧತೆ ಆರಂಭಿಸಬೇಕು ಎಂದು ತಾಕೀತು ಮಾಡಿದ್ದರು. ಆದಾಗ್ಯೂ, ಪೂರ್ವ ತಯಾರಿ ಗೋಚರವಾಗುತ್ತಿಲ್ಲ.
ವೈಮಾನಿಕ ಪ್ರದರ್ಶನ ಆಯೋಜನೆ ಕುರಿತು ಎರಡ್ಮೂರು ತಿಂಗಳಿಂದಲೇ ತಯಾರಿ ಮಾಡಿಕೊಳ್ಳಬೇಕು. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಬೇಕು. ಅವರು ಭಾರತೀಯ ವಾಯುದಳದ ಏರ್ ಮಾರ್ಷಲ್‌ಗೆ ಮತ್ತು ಕೇಂದ್ರ ರಕ್ಷಣಾ ಸಚಿವಾಲಯದ ಮುಖ್ಯ ಕಾರ್ಯದರ್ಶಿಗೆ ಪತ್ರ ವ್ಯವಹಾರ ಮಾಡಬೇಕು. ಆದರೆ ಈ ಸಲ ಈ ರೀತಿಯ ಆಡಳಿತಾತ್ಮಕ ಪ್ರಕ್ರಿಯೆ ತಡವಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಡಳಿತವು ರಾಜ್ಯ ಸರ್ಕಾರದ ನೆರವಿನೊಂದಿಗೆ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಈ ಪ್ರದರ್ಶನ ಏರ್ಪಡಿಸುವುದು ಕಷ್ಟಕರವಾಗುತ್ತಿದ್ದು, ರಕ್ಷಣಾ ಸಚಿವಾಲಯದಿಂದಲೂ ಏರ್ ಷೋ ಆಯೋಜನೆಗೆ ಈವರೆಗೂ ಹಸಿರು ನಿಶಾನೆ ದೊರೆತಿಲ್ಲ. ಇದಕ್ಕೆ ಕಾರಣವೂ ಗೊತ್ತಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದಸರಾದಲ್ಲಿ ಏರ್ ಷೋ ಖದರ್ ಬೇರೆಯೇ. ಆಕಾಶದಲ್ಲಿ ಚಿತ್ತಾರ ಮೂಡಿಸುತ್ತ ಸಾವಿರಾರು ಅಡಿ ಎತ್ತರದಿಂದ ಹಾರಿ ಬಂದು ತಮ್ಮ ಕೈಚಳಕ ತೋರುತ್ತಿದ್ದ ಲೋಹದ ಹಕ್ಕಿಗಳು ನೋಡಲು ಜನರು ಮುಗಿಬೀಳುತ್ತಾರೆ. ಹೀಗಾಗಿ, ಪ್ರತಿ ವರ್ಷ ಈ ಪ್ರದರ್ಶನವನ್ನು ನಿಯಮಿತವಾಗಿ ಆಯೋಜಿಸಿಕೊಂಡು ಬರಬೇಕಿದೆ. ಇದರಿಂದ ದಸರಾ ಉತ್ಸವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಳ್ಳಲಿದೆ. ಆದರೆ ಇದು ಕೆಲ ವರ್ಷ ನಡೆದಿಲ್ಲ. ಕೆಲ ವರ್ಷ ನಡೆದಿದೆ. ಹೀಗಾಗಿ, ಈ ವಿಷಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ.
2009ರ ದಸರಾದಲ್ಲಿ ವೈಮಾನಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಬಳಿಕ ಇದು 8 ವರ್ಷ ನಡೆಯಲಿಲ್ಲ. 2017ರಲ್ಲಿ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ 2018ರಲ್ಲಿ ಇದನ್ನು ಆಯೋಜಿಸಲು ಆಗಲಿಲ್ಲ. 2019ರಲ್ಲಿ ಇದು ಜರುಗಿತ್ತು. ಕರೊನಾ ಕಾರಣಕ್ಕೆ 2020 ಮತ್ತು 2021ರ ಸಾಲಿನಲ್ಲಿ ಸರಳವಾಗಿ ನಡೆದ ದಸರಾದಲ್ಲಿ ಏರ್ ಶೋ ಆಯೋಜನೆಗೆ ಯಾರೂ ಆಸಕ್ತಿ ತೋರಲಿಲ್ಲ. 2022ರಲ್ಲೂ ಇದು ನಡೆಯಲಿಲ್ಲ. ಇದಾದ 4 ವರ್ಷದ ಬಳಿಕ 2023ರಲ್ಲಿ ಏರ್ ಶೋ ನೋಡುವ ಅವಕಾಶ ದೊರೆಯಿತು. ಈ ಸಲ ಏನಾಗುತ್ತದೆಯೋ ಗೊತ್ತಿಲ್ಲ.
ಕಳೆದ ಬಾರಿ ಲೋಹದ ಹಕ್ಕಿಗಳು ಆಗಸದಲ್ಲಿ ರೋಮಾಂಚನಕಾರಿ ಚಿತ್ತಾರ ನೋಡುಗರನ್ನು ಮುದಗೊಳಿಸಿತ್ತು. ಈ ಹಿಂದಿನ ಏರ್ ಶೋಗಿಂತ ಇದು ಭಿನ್ನವಾಗಿತ್ತು. ಏರ್ ಶೋದಲ್ಲಿ ಭಾರತೀಯ ವಾಯುಸೇನೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ, 6 ಸಾವಿರ ಅಡಿ ಎತ್ತರದಿಂದ ಯೋಧರಿಂದ ಸ್ಕೈಡೈವಿಂಗ್, ಹಗ್ಗದ ಮೂಲಕ ಮೈದಾನಕ್ಕೆ ಇಳಿದು ಕಲ್ಪಿತ ಯುದ್ಧ ಪ್ರದರ್ಶನ, ಪ್ಯಾರಾಚೂಟ್ ಧರಿಸಿ ಜಿಗಿದು ಮೈನವಿರೇಳಿಸುವ ಕಸರತ್ತು ಈ ರೀತಿಯ ಸಾಹಸ ಪ್ರದರ್ಶನ ಇರಲಿಲ್ಲ. ಬರೀ ಆಗಸದಲ್ಲಿ ಜೆಟ್ ವಿಮಾನಗಳ ಅಬ್ಬರ ಮಾತ್ರ ಇತ್ತು. ಇದನ್ನು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಕುಳಿತಿದ್ದ ಸಹಸ್ರಾರು ಜನರು ವೀಕ್ಷಿಸಿದ್ದರು.
ಕೊಯಮತ್ತೂರಿನ ಸೋಲೂರು ಏರ್ ಬೇಸ್‌ನಿಂದ ಕಾರ್ಯಾಚರಣೆ ನಡೆಸಿದ ಸೂರ್ಯಕಿರಣ್ ತಂಡದ 9 ವಿಮಾನಗಳು ಹಾರಾಟ ನಡೆಸಿದ್ದವು. ಈ ಸಲ ಆಕಾಶದಲ್ಲಿ ಜೆಟ್ ವಿಮಾನಗಳು, ಹೆಲಿಕಾಪ್ಟರ್ ಪ್ರದರ್ಶನವೂ ಇರಲಿ, ನೆಲದ ಮೇಲೆ ಸೈನಿಕರ ವಿವಿಧ ಸಾಹಸಮಯ ಕಸರತ್ತು ಪ್ರದರ್ಶನ ಇರಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವೈಮಾನಿಕ ಪ್ರದರ್ಶನ ಇನ್ನೂ ಅಂತಿಮವಾಗಿಲ್ಲ. ಈ ಕುರಿತು ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆ ಕಡೆಯಿಂದ ಪ್ರತಿಕ್ರಿಯೆ ಬಂದ ಬಳಿಕ ದಿನಾಂಕ ನಿಗದಿಯಾಗಲಿದೆ. ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ