ಚೌಕಸಂದ್ರ ಜಯರಾಮ ನಾಯಕ್, ಹಾರೋಹಳ್ಳಿ
ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಎರಡೂವರೆ ವರ್ಷ ಕಳೆದರೂ, ಅತ್ತ ಚುನಾವಣೆಯೂ ಇಲ್ಲ, ಇತ್ತ ಪುರಸಭೆ ಘೋಷಣೆಯೂ ಇಲ್ಲದೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದು, ಅಭಿವೃದ್ಧಿ ಕಾಮಗಾರಿಗಳು ಹಳ್ಳ ಹಿಡಿದಿದೆ. ಸರ್ಕಾರಿ ಸೇವೆಗಳು ಸಹ ಸಕಾಲಕ್ಕೆ ಸಿಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಕಳೆದ 2021ರ ಮಾ.6ರಂದು ಹಾರೋಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಘೋಷಣೆ ಮಾಡಲಾಗಿತ್ತು. ಆದರೆ ಈವರೆಗೂ ವಾರ್ಡ್ ವಿಂಗಡಣೆ ಸೇರಿದಂತೆ ಯಾವುದೇ ರೀತಿಯ ಕೆಲಸ ಕಾರ್ಯಗಳು ಆಗಿಲ್ಲ. ಗ್ರಾಮ ಪಂಚಾಯಿತಿಯಾಗಿ ಕೆಲಸ ಮಾಡುತ್ತಿದ್ದಾಗ 37 ವಾರ್ಡ್‌ಗಳು ಇದ್ದು, ಈಗಲೂ ಅದೇ ಆಧಾರದ ಮೇಲೆ ಕೆಲಸಗಳು ಸಾಗುತ್ತಿವೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹಾರೋಹಳ್ಳಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸಬೇಕು ಎನ್ನುವುದು ಯಾವ ಜನಪ್ರತಿನಿಧಿಗಳ ಗಮನಕ್ಕೂ ಬರಲಿಲ್ಲ. ಹಿಂದಿನ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ್, ಶಾಸಕಿ ಅನಿತಾ ಕುಮಾರಸ್ವಾಮಿ, ಸಂಸದ ಡಿಕೆ ಸುರೇಶ್ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾರೋಹಳ್ಳಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸುವ ಗೋಜೀರಲಿ, ಈ ಕಡೆ ತಲೆ ಹಾಕಿಯೂ ನೋಡುತ್ತಿರಲಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯದಿರುವುದರಿಂದ ಪಟ್ಟಣದ ಅಭಿವೃದ್ಧಿ ಕೆಲಸಗಳು ವಿಳಂಬವಾಗುತ್ತಿವೆ. ಜತೆಗೆ ಸಾರ್ವಜನಿಕರಿಕೆ ಸರ್ಕಾರದ ಯಾವು ಸೇವೆಗಳು ಸಕಾಲಕ್ಕೆ ಲಭ್ಯವಾಗುತ್ತಿಲ್ಲ. ಕಚೇರಿಗೆ ಬಂದು ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ. ಚುನಾವಣೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಅಧಿಕಾರಿಗಳು ದರ್ಬಾರ್ ನಡೆಸುತ್ತಿದ್ದು, ತಮಗೆ ಇಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ.
ಹಾರೋಹಳ್ಳಿ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಲಿದ್ದು, ಆಗ ವಾರ್ಡ್ ವಿಂಗಡಣೆಯಾಗಿ ಒಟ್ಟಿಗೆ ಚುನಾವಣೆ ನಡೆಯಲಿದೆ ಎನ್ನುವುದು ಕೆಲ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಯಾವಾಗ ಪುರಸಭೆ ಆಗುತ್ತದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಈಗಲಾದರು ಸಂಬಂಧಿತ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಹಾರೋಹಳ್ಳಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸಬೇಕು ಇಲ್ಲವೇ ಪುರಸಭೆ ಎಂದು ಘೋಷಣೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಹಾರೋಹಳ್ಳಿ ಪಟ್ಟಣ ಪಂಚಾಯತಿಯನ್ನು ಪುರಸಭೆ ಮಾಡಲು ಪ್ರಸ್ತಾವಣೆ ಕಳುಹಿಸಲಾಗಿದೆ. ಇದೇ ಕಾರಣಕ್ಕಾಗಿ ಚುನಾವಣೆ ವಿಳಂಬವಾಗುತ್ತಿದೆ. ಸರ್ಕಾರ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಿದೆ.
ನಟರಾಜ್, ಮುಖ್ಯಾಧಿಕಾರಿ, ಹಾರೋಹಳ್ಳಿ ಪಟ್ಟಣ ಪಂಚಾಯಿತಿ.
ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯದಿರುವುದರಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿವೆ.
ಜಗದೀಶ್ ಗೌಡ ಹೊಸಗಬ್ಬಾಡಿ.