ಕಡೂರು: ಬಂಜಾರ ಸಮಾಜದ ಶ್ರೇಷ್ಠ ದಾರ್ಶನಿಕರಾದ ಸೇವಾಲಾಲ ಮಹಾರಾಜರು ತಮ್ಮ ಆದರ್ಶ ಮತ್ತು ತತ್ವಗಳ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ತಾಲೂಕಿನ ಎನ್.ಜಿ.ಕೊಪ್ಪಲು ಗ್ರಾಮದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಜನರು ಸನ್ಮಾರ್ಗದಲ್ಲಿ ನಡೆಯಲು ಸಂತ ಸೇವಾಲಾಲ್ ಅವರು ದಾರಿ ದೀಪವಾಗಿದ್ದಾರೆ. ಸಮಾಜ ಸುಧಾರಕರಾಗಿ ಅಹಿಂಸೆ, ತ್ಯಾಗಗಳನ್ನು ಪಾಲಿಸಿ ಅದರಂತೆ ಬಂಜಾರ ಸಮಾಜದ ಬೆಳವಣಿಗೆಗೆ ಒತ್ತು ನೀಡಿದ್ದರು ಎಂದರು.
ಬಂಜಾರ ಸಮಾಜ ಸಾಂಸ್ಕೃತಿಕ ನೆಲೆಯಲ್ಲಿ ರಾಯಭಾರಿಯಾಗಿ ಜನಪದ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ತಮ್ಮ ಪೂರ್ವಿಕರ ಸಂಪ್ರಾದಯಗಳ ಆಚರಣೆಗಳನ್ನು ನಡೆಸುತ್ತಾ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಿದಾಗ ಸಮಾಜದ ಉನ್ನತಿಗೆ ಸಾಧ್ಯ ಎಂದರು.
ಸೇವಾಲಾಲರ ಭಾವಚಿತ್ರದೊಂದಿಗೆ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಬಂಜಾರ ಸಮಾಜದ ಮಹಿಳೆಯರು ಬಂಜಾರ ಸಂಸ್ಕೃತಿಯ ಉಡುಗೆಯೊಂದಿಗೆ ನೃತ್ಯದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ರಮೇಶ್‌ನಾಯ್ಕ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣನಾಯ್ಕ, ಚರಣ್‌ನಾಯ್ಕ, ದಿನೇಶನಾಯ್ಕ, ಲಚ್ಚಾನಾಯ್ಕಾ ಮತ್ತಿತರಿದ್ದರು.