ಬೆಂಗಳೂರು: ಖಾಸಗಿ ಕಂಪನಿ ನೌಕರನ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು, ಕಾರು ಸಮೇತ ಪರಾರಿಯಾಗಿದ್ದಾರೆ. ಇಸ್ರೋ ಲೇಔಟ್ ಬಳಿಯ ವಿಕ್ರಮ್ ನಗರದ ರಾಮ್‌ನಾರಾಯಣ ಮಾಳ್ವಿ ಎಂಬುವರು ದೂರು ನೀಡಿದ್ದಾರೆ.
ಖಾಸಗಿ ಕಂಪನಿ ನೌಕರರಾಗಿರುವ ರಾಮ್‌ನಾರಾಯಣ್, ಆ.6ರಂದು ಕುಟುಂಬಸಮೇತ ಮಧ್ಯಪ್ರದೇಶದ ಭೂಪಾಲ್‌ಗೆ ಹೋಗಿದ್ದರು. ಆಗಸ್ಟ್ 11ರ ಬೆಳಗ್ಗೆ ಅವರ ಸ್ನೇಹಿತ ಕರೆ ಮಾಡಿ ಮನೆ ಕಳ್ಳತನ ಆಗಿರುವ ವಿಷಯ ಮುಟ್ಟಿಸಿದ್ದರು. ಬಳಿಕ ರಾಮ್‌ನಾರಾಯಣ್ ಅಲ್ಲಿಂದ ಹೊರಟು ಬೆಂಗಳೂರಿಗೆ ಬಂದು ನೋಡಿದಾಗ ಮನೆಯ ಮುಖ್ಯದ್ವಾರ ತೆರೆದು ಕಳ್ಳರು ಒಳಗೆ ನುಗ್ಗಿ ಚಿನ್ನ-ಬೆಳ್ಳಿ ಆಭರಣ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಅಲ್ಲದೆ, ಮನೆಯಲ್ಲಿದ್ದ ಕಾರಿನ ಕೀ ತೆಗೆದುಕೊಂಡು ಕಾಂಪಾಂಡ್ನಲ್ಲಿದ್ದ ಟಾಟಾ ಟಿಯಾಗೊ ಕಾರು ಓಡಿಸಿಕೊಂಡು ಹೋಗಿದ್ದಾರೆ.
ಈ ಕಳ್ಳರು ಅಂದೇ ಪಕ್ಕದಲ್ಲಿದ್ದ ಸ್ಟುಡಿಯೋಗೆ ನುಗ್ಗಿ ದುಬಾರಿ ಕ್ಯಾಮರಾ ಸಹ ಕಳ್ಳತನ ಮಾಡಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ರಾಮ್ನಾರಾಯನ್ ಕೊಟ್ಟ ದೂರಿನ ಮೇರೆಗೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.