ಚಿಕ್ಕಬಳ್ಳಾಪುರ: ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಒಂದು ದಿನ ಮಾತ್ರ ಅಹೋರಾತ್ರಿ ಧರಣಿ ನಡೆಸುವುದರಿಂದ ಏನು ಪ್ರಯೋಜನವಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಪರೋಕ್ಷ$ವಾಗಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಾಸ್ತಿಮ್ಮನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗೂ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಬಿಜೆಪಿ ನಾಯಕರು ಒಂದು ದಿನ ಮಾತ್ರ ಹೋರಾಟವನ್ನು ಕೈಗೊಂಡು ಪ್ರಚಾರ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು ಬೆಲೆ ಏರಿಸಿದಾಗ ತುಟಿ ಬಿಚ್ಚುವುದಿಲ್ಲ. ಇಂತಹವರು ಜನಪರ ಕಾಳಜಿ ಇದ್ದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಿ, ಕನಿಷ್ಠ 6 ತಿಂಗಳು ರಾಜ್ಯ ಬಿಜೆಪಿ ಅಧ್ಯಕ್ಷರು ನೀರು ಸಹ ಕುಡಿಯಬಾರದು. ಆಗ ಹೋರಾಟಕ್ಕೆ ಸಾರ್ಥಕತೆ ಬರುತ್ತದೆಯೇ? ಎನ್ನುವುದನ್ನು ನೋಡೋಣ ಎಂದು ತಿಳಿಸಿದರು.
*ಗ್ರಾಮಗಳಲ್ಲಿ ಸಂಚಾರ
ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಯರನಾಗೇನಹಳ್ಳಿ, ಮೋಟೂರು, ನಾರೇನಹಳ್ಳಿ, ಕೊಂಡೇನಹಳ್ಳಿ, ನಾಸ್ತಿಮ್ಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಶಾಸಕರು ಜನರ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಇಒ ಮಂಜುನಾಥ್, ಮುಖಂಡರಾದ ಗವಿರಾಯಪ್ಪ, ಕೃಷ್ಣಪ್ಪ ಮತ್ತಿತರರು ಇದ್ದರು.