ಜಿಲ್ಲೆ

ಜನತಾ ಬಜಾರ್​ನಲ್ಲಿ ವ್ಯಾಪಾರ ಯಾವಾಗ?

ವಿನಯ ಹೆಗಡೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

ನಗರದ ಹೃದಯ ಭಾಗವಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ನಿರ್ವಿುಸಿರುವ ಎರಡು ಅಂತಸ್ತಿನ ಜನತಾ ಬಜಾರ್ ಮಾರುಕಟ್ಟೆ ಹೊಸ ಕಟ್ಟಡ ಉದ್ಘಾಟನೆಯಾಗಿ ನಾಲ್ಕು ತಿಂಗಳು ಗತಿಸುತ್ತ ಬಂದರೂ ಇನ್ನೂ ಅಲ್ಲಿ ವ್ಯಾಪಾರ ಶುರುವಾಗಿಲ್ಲ.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 18.50 ಕೋಟಿ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಅನುಕೂಲಕ್ಕಾಗಿ ಮಾರುಕಟ್ಟೆ ನಿರ್ವಿುಸಲಾಗಿದೆ.

ನೆಲ ಮಹಡಿಯಲ್ಲಿ ತರಕಾರಿ ಮಾರಾಟದ 50 ಕಟ್ಟೆ ಮತ್ತು 31 ಮಳಿಗೆ ನಿರ್ವಿುಸಲಾಗಿದೆ. ಮೊದಲನೇ ಮಹಡಿಯಲ್ಲಿ 71 ಕಟ್ಟೆ, 22 ಮಳಿಗೆ ನಿರ್ವಿುಸಲಾಗಿದೆ. ಎರಡನೇ ಮಹಡಿಯಲ್ಲಿ 20 ಕೊಠಡಿಗಳನ್ನು (ಆಫೀಸ್) ನಿರ್ವಿುಸಲಾಗಿದೆ.

ಕಟ್ಟಡದ ನಿರ್ಮಾಣ ಕಾರ್ಯ 2020ರ ನವೆಂಬರ್ 23ರಂದು ಆರಂಭವಾಗಿ 2022ರ ಅಕ್ಟೋಬರ್ 30ರಂದು ಮುಕ್ತಾಯವಾಗಿದೆ.

2023ರ ಫೆಬ್ರವರಿ 19ರಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ ಮತ್ತಿತರ ಜನಪ್ರತಿನಿಧಿಗಳು ಉದ್ಘಾಟಿಸಿದ್ದರು.

ಮಾರುಕಟ್ಟೆ ಉದ್ಘಾಟನೆ ಆದಾಗಿನಿಂದ ಅಂಗಡಿಗಳಲ್ಲಿ ವ್ಯಾಪಾರ ಮಾಡಲು ವ್ಯಾಪಾರಸ್ಥರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಬೇಗ ಅಂಗಡಿಗಳನ್ನು ನೀಡುವಂತೆ ಹು-ಧಾ ಪಾಲಿಕೆ ಅಧಿಕಾರಿಗಳು, ಮೇಯರ್, ಪಾಲಿಕೆ ಸದಸ್ಯರಿಗೆ ಮನವಿ ಮಾಡುತ್ತ ಬಂದಿದ್ದಾರೆ. ಆದರೆ, ಈವರೆಗೆ ಪಾಲಿಕೆ ಅಧಿಕಾರಿಗಳು ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ವ್ಯಾಪಾರಸ್ಥರಿಗೆ ನೀಡಿಲ್ಲ.

ಮಳೆಗಾಲ ಶುರುವಾಗುವುದಕ್ಕೂ ಮುನ್ನ ತರಕಾರಿ ಮತ್ತು ಕಿರಾಣಿ ಅಂಗಡಿಗಳನ್ನು ಕೊಡಬೇಕು ಎಂಬುದು ವ್ಯಾಪಾರಸ್ಥರ ಮನವಿ.

ಹುಬ್ಬಳ್ಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಜನತಾ ಬಜಾರ್ ಮಾರುಕಟ್ಟೆ ಕಟ್ಟಡ ನಿರ್ವಿುಸಿ ಅದನ್ನು ರಾಜ್ಯ ಸರ್ಕಾರದ ನಿಯಮಾವಳಿಯಂತೆ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. | ಪ್ರಿಯಾಂಗಾ ಎಂ. ಹು-ಧಾ ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕಿ
ಜನತಾ ಬಜಾರ್ ಮಾರುಕಟ್ಟೆ ಉದ್ಘಾಟನೆಯಾಗಿ 4 ತಿಂಗಳಾಗಿದೆ. ಬೇಗ ಅಂಗಡಿಗಳನ್ನು ಕೊಡುವಂತೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದೇವೆ. ಅವರು ಕಟ್ಟಡ ನಿರ್ವಿುಸಿ ಈಗಾಗಲೇ ಅದನ್ನು ಹು-ಧಾ ಪಾಲಿಕೆಗೆ (ಡೀಮ್್ಡ ಹ್ಯಾಂಡ್ ಓವರ್) ಹಸ್ತಾಂತರಿಸಿದ್ದೇವೆ ಎಂದು ತಿಳಿಸಿದ್ದಾರೆ. ಪಾಲಿಕೆ ಮೇಯರ್ ಮತ್ತು ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. | ಮಹಾದೇವಪ್ಪ ಕರಡಿಗುಡ್ಡ, ರಾಜು ವಾಲ್ಮೀಕಿ ತರಕಾರಿ ವ್ಯಾಪಾರಸ್ಥ
ಜನತಾ ಬಜಾರ್ ಮಾರುಕಟ್ಟೆಯಲ್ಲಿ ಈ ಹಿಂದೆ ಇದ್ದ ಅಂಗಡಿಕಾರರು ಮೊದಲ ಆದ್ಯತೆಯಾಗಿ ತಮಗೇ ಅಂಗಡಿಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕೆಲ ಅಂಗಡಿಕಾರರ ಲೀಸ್ ಅವಧಿ ಮುಗಿದಿದೆ. ಅಲ್ಲದೆ, ಹೊಸ ಕಟ್ಟಡ ಆಗಿದ್ದರಿಂದ ಶಾಸಕರ ನೇತೃತ್ವದಲ್ಲಿ ಒಂದು ಸಭೆ ನಡೆಸಿ, ಯೋಗ್ಯ ದರ ನಿಗದಿ ಮಾಡಲಾಗುವುದು. ಇದರಿಂದ ಪಾಲಿಕೆಗೂ ಆದಾಯ ಬರಲಿದೆ. 15ರಿಂದ 20 ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಅಂಗಡಿಗಳನ್ನು ವ್ಯಾಪಾರಸ್ಥರಿಗೆ ಕೊಡಲಾಗುವುದು. | ಡಾ. ಗೋಪಾಲಕೃಷ್ಣ ಬಿ. ಹು-ಧಾ ಮಹಾನಗರ ಪಾಲಿಕೆ ಆಯುಕ್ತ