ಗದಗ: ಎಲ್ಲ ಕರ್ಮಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಮನಸ್ಸನ್ನು ಸಿದ್ಧಾಂತ ಶಿಖಾಮಣಿ ನಿಯಂತ್ರಸಬಲ್ಲದು. ಮನುಷ್ಯನ ಮನಸನ್ನು ಶ್ರೇಷ್ಠತೆಯೆಡೆಗೆ ಕರೆದೊಯ್ಯುವ ಗ್ರಂಥವೇ ಸಿದ್ಧಾಂತ ಶಿಖಾಮಣಿ ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಎಚ್.ಕೆ. ಪಾಟೀಲ ಸಭಾಭವನದಲ್ಲಿ ಸಿದ್ಧಾಂತ ಶಿಖಾಮಣಿ ಕುರಿತು ಸೋಮವಾರ ಪ್ರವಚನ ನೀಡಿದರು. ಪ್ರಕೃತಿಯೊಂದಿಗೆ ಹೊಂದಾಣಿಕೆ ಇಲ್ಲದ ಕಾರಣ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಪ್ರಾಣಿಗಳು ಪ್ರಕೃತಿಯೊಂದಿಗೆ ಇರುತ್ತವೆ. ಹಾಗಾಗಿ, ಸದೃಢತೆ ಹೊಂದಿರುತ್ತವೆ. ಮನುಷ್ಯ ಪ್ರಕೃತಿಯ ವಿರುದ್ಧದ ಬೆಳವಣಿಗೆ ನಿಲ್ಲಿಸಬೇಕು ಎಂದರು.
ಯೋಗದ ಕುರಿತು ಮಾತನಾಡಿದ ಶ್ರೀಗಳು, ಮಾನವ ಯೋಗಿ ಆಗಬೇಕು. ಯಾವುದೇ ಕಾರ್ಯವನ್ನು ಶ್ರದ್ಧೆಯಿಂದ ಮಾಡುವುದೇ ಯೋಗ. ನಮ್ಮ ದೈನಂದಿನ ಕಾರ್ಯಗಳು ಯೋಗದಿಂದ ಕೂಡಬೇಕು. ಮಾಡಿ ಮಾಡಿ ಕೆಟ್ಟರು ಮನಸ್ಸಿಲ್ಲದೆ ಎಂಬ ನುಡಿಯಂತೆ ಮನಸಿಲ್ಲದೆ ಯೋಗ ಕಾರ್ಯಗಳನ್ನು ಮಾಡಿಯೂ ಕೆಡುತ್ತಾರೆ. ಭಾವ ಶುದ್ಧ ಇದ್ದಾಗ ಮಾತ್ರ ಯೋಗ ಕಾರ್ಯಗಳು ಲಿಸುತ್ತವೆ ಎಂದು ಶ್ರೀಗಳು ನುಡಿದರು.
ಪೂಜಾ ವಿಧಾನದ ಬಗ್ಗೆ ತಿಳಿ ಹೇಳಿದ ಶ್ರೀಗಳು, ಪೂಜೆ ಮಾಡಲು ನೀರು ಬೇಕು. ನೀ ಅಲ್ಲಿರಬೇಕು. ಮಾನಸಿಕವಾಗಿ ನೀ ಪೂಜಾ ಸ್ಥಳದಲ್ಲಿ ಇರಬೇಕು. ವಾಸ್ತವಿಕವಾಗಿ ಪರಮಾತ್ಮನಿಗೆ ಏನೂ ಅಗತ್ಯವಿಲ್ಲ್ಲ. ನಾವೂ ಪರಮಾತ್ಮನ ಮಕ್ಕಳು. ದೇವರಿಗೆ ಏನೇ ನೈವೇದ್ಯ ಮಾಡಿದರೂ ಮಕ್ಕಳಿಗೆ ಲಾಭ. ಶುಭ್ರತೆಗಾಗಿ ನೈವೇದ್ಯ ಮಾಡಲಾಗುತ್ತದೆ. ಮನಸು ಶುಭ್ರವಾಗಬೇಕಾದರೆ ನಮಗಿಷ್ಟದ ದೇವರಿಗೆ ನೈವೇದ್ಯ ಮಾಡಿ, ಅದನ್ನು ನಾವು ಬಳಸಬೇಕು. ಪರಮಾತ್ಮನಿಗೆ ಶುದ್ಧ ಭಾವನೆಗಳ ಹಸಿವು ಇದೆ ವಿನಃ ಭಾವಶೂನ್ಯ ಪೂಜೆಯನ್ನು ಸಹ ದೇವರು ಸ್ವೀಕರಿಸುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಸಾದ ಸೇವೆ ನೀಡಿದವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಎಂ.ಎಂ. ಹಿರೇಮಠ ಇತರರು ಇದ್ದರು.