ಜಿಲ್ಲೆ

ವ್ಹೀಲಿಂಗ್ ಕಡಿವಾಣಕ್ಕೆ ಕಠಿಣ ಕಾನೂನು

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿನಲ್ಲೂ ಇತ್ತೀಚಿಗೆ ವ್ಹೀಲಿಂಗ್ ಪಿಡುಗು ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದರೂ ಹರೆಯದ ಹುಡುಗರು ಮಾತ್ರ ಪೊಲೀಸರ ಕಣ್ತಪ್ಪಿಸಿ ವ್ಹೀಲಿಂಗ್ ನಡೆಸುವುದು ಕಂಡುಬರುತ್ತಿದೆ. ಅದರಲ್ಲೂ ಕಾಲೇಜುಗಳ ಬಳಿ ಬೆಳಗ್ಗೆ ಮತ್ತು ಸಂಜೆ ಈ ದೃಶ್ಯ ಸಾಮಾನ್ಯ ಎಂಬAತಾಗಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಪೋಷಕರ ಮೇಲೆಯೂ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದ್ದ ವ್ಹೀಲಿಂಗ್ ಹಾವಳಿ ಈಗ ಇತರೆಡೆಗಳಿಗೂ ವ್ಯಾಪಿಸುತ್ತಿದೆ. ಕೊಡಗಿನಲ್ಲಿ ಕೂಡ ಪುಂಡ ಯುವಕರು ಈ ಪಿಡುಗಿಗೆ ಜೋತುಬಿದ್ದಿದ್ದು, ತಾವು ಮಾತ್ರವಲ್ಲದೆ ಪಾದಚಾರಿಗಳು, ಇತರ ವಾಹನ ಸವಾರರನ್ನೂ ಅಪಾಯಕ್ಕೆ ಸಿಲುಕಿಸುವ ಪ್ರಕರಣಗಳು ಕಂಡು ಬರುತ್ತಿದೆ. ಥ್ರಿಲ್ಲಿಂಗ್ ನೆಪದಲ್ಲಿ ತಮ್ಮ ಪ್ರಾಣದ ಜತೆಗೆ ಆಟವಾಡುವುದಲ್ಲದೆ ಸಾರ್ವಜನಿಕರ ಜೀವದ ಜತೆಗೂ ಚೆಲ್ಲಾಟ ಆಡುತ್ತಾ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದಾರೆ.

ರಾಜಧಾನಿಗೆ ಮಾತ್ರ ಸೀಮಿತ ಎಂಬAತಿದ್ದ ಪಿಡುಗು ಸಾಂಕ್ರಾಮಿಕ ರೋಗದ ರೀತಿಯಲ್ಲಿ ಕೊಡಗಿನಂಥ ಗ್ರಾಮೀಣ ಪ್ರದೇಶಗಳಿಗೂ ಹರಡಿರುವುದು ಪ್ರಜ್ಞಾವಂತರನ್ನು ಚಿಂತಿಸುವAತೆ ಮಾಡಿದೆ. ವಾಹನ ಚಾಲನೆಯ ರೋಮಾಂಚನಕಾರಿ ಅನುಭವ ಪಡೆಯಲು, ಬೇರೆಯವರ ಗಮನ ತಮ್ಮ ಕಡೆಗೆ ಸೆಳೆಯಲು, ಹುಡುಗಿಯರನ್ನು ಆಕರ್ಷಿಸಲು, ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಲು...ಹೀಗೆ ವಿವಿಧ ಕಾರಣಗಳಿಗೆ ಹೆಚ್ಚಾಗಿ ಹದಿಹರೆಯದವರೇ ಮಾಡುವ ಇಂಥ ದುಸ್ಸಾಹಸಗಳು ಈಗಾಗಲೇ ಹಲವರ ಪ್ರಾಣಕ್ಕೆ ಅಪಾಯ ತಂದಿದ್ದರೆ, ಬಹಳಷ್ಟು ಯುವಕರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ.

ವ್ಹೀಲಿಂಗ್ ಜತೆಗೆ ಅತಿ ವೇಗವಾಗಿ ವಾಹನ ಚಲಾಯಿಸುವುದು ಮಾತ್ರವಲ್ಲದೆ ಬೈಕ್‌ಗಳ ಸೈಲೆನ್ಸರ್ ಮಾರ್ಪಾಡು ಮಾಡಿ ಕರ್ಕಶ ಧ್ವನಿ ಬರುವಂತೆ ಮಾಡಿಕೊಂಡು ಸಾರ್ವಜನಿಕರಿಗೆ ಕಿರಿ ಕಿರಿ ಮಾಡುವುದೂ ಅಲ್ಲಲ್ಲಿ ಕಂಡು ಬರುತ್ತಿದೆ. ಕಾಲೇಜುಗಳ ಬಳಿಯೇ ಹದಿಹರೆಯದವರ ಇಂಥ ಆಟಾಟೋಪ ಹೆಚ್ಚಾಗಿ ಪುನರಾವರ್ತನೆ ಆಗುತ್ತಿರುತ್ತದೆ. ಅದರಲ್ಲೂ ಬೆಳಗ್ಗೆ ಕಾಲೇಜಿಗೆ ತೆರಳುವ ಸಮಯದಲ್ಲಿ ಮತ್ತು ಸಂಜೆ ಕಾಲೇಜು ಬಿಡುವ ವೇಳೆ ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುಂಡರಿAದ ಇಂಥ ಕೃತ್ಯಗಳು ಸಾಮಾನ್ಯ ಎಂಬAತಾಗಿದೆ.

ಇತ್ತೀಚೆಗೆ ಮಡಿಕೇರಿಯಲ್ಲಿ ಬೈಕ್ ಸೈಲೆನ್ಸರ್ ಮಾರ್ಪಾಡು ಮಾಡಿದ ಪ್ರಕರಣವೊಂದನ್ನು ಪತ್ತೆ ಹಚ್ಚಿದ್ದ ಪೊಲೀಸರು 25,500 ರೂ. ಮೊತ್ತದ ದಂಡ ವಿಧಿಸಿ ಸುದ್ದಿ ಆಗಿದ್ದರು. ಕುಶಾಲನಗರದಲ್ಲೂ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಂಥ ಬೈಕ್‌ಗಳನ್ನು ವಶಪಡಿಸಿಕೊಳ್ಳುವುದಲ್ಲದೆ ದಂಡ ವಿಧಿಸಿ, ಪೋಷಕರಿಗೂ ಎಚ್ಚರಿಕೆ ಕೊಟ್ಟು ಕಳುಹಿಸುವ ಕೆಲಸ ನಡೆದಿತ್ತು. ಕಾರಿನಲ್ಲಿ ಈ ರೀತಿಯ ಸರ್ಕಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವ್ಯಕ್ತಿಯೊಬ್ಬನನ್ನು ಪತ್ತೆ ಹಚ್ಚಿ, ದಂಡ ವಿಧಿಸಿ, ಕ್ಷಮಾಪಣೆಯನ್ನೂ ಮಡಿಕೇರಿ ಪೊಲೀಸರು ಬರೆಯಿಸಿಕೊಂಡಿದ್ದರು.

ವ್ಹೀಲಿಂಗ್ ಪಿಡುಗು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ಪೋಷಕರ ದೂರಿನ ಹಿನ್ನೆಲೆಯಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಕಡೆಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗುತ್ತಿದೆ. ಆದರೂ ಪೊಲೀಸರ ಕಣ್ಣು ತಪ್ಪಿಸಿ ಬೇರೆ ಕಡೆ ಅಥವಾ ಪೊಲೀಸರು ಇಲ್ಲದ ಸಮಯ ನೋಡಿಕೊಂಡು ವ್ಹೀಲಿಂಗ್ ಮಾಡುವುದು ಅಲ್ಲಲ್ಲಿ ಮುಂದುವರಿದಿದೆ. ಮಾದಕ ಪದಾರ್ಥಗಳನ್ನು ಸೇವಿಸಿ ವ್ಹೀಲಿಂಗ್ ಮಾಡುವುದು ಕೂಡ ಕೆಲವು ಹದಿ ಹರೆಯದವರು ರೂಢಿಸಿಕೊಂಡಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ.

ವ್ಹೀಲಿಂಗ್ ಪಿಡುಗು ಅಪಾಯಕಾರಿ ರೀತಿಯಲ್ಲಿ ಎಲ್ಲಾ ಕಡೆಗೆ ವ್ಯಾಪಿಸುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಈ ಸಂಬAಧ ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಡಾ. ಕೆ. ಗೋವಿಂದರಾಜ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ವ್ಹೀಲಿಂಗ್ ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪ್ರಾಪ್ತರ ಪೋಷಕರ ವಿರುದ್ಧವೇ ಪ್ರಕರಣ ದಾಖಲಿಸುವ ಎಚ್ಚರಿಕೆ ಕೊಟ್ಟಿದ್ದಾರೆ.

ವ್ಹೀಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗುವ ಬೈಕ್ ಸವಾರರ ವಿರುದ್ಧ ಬಿ.ಎನ್.ಎಸ್. ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ, ಸವಾರರನ್ನು ದಸ್ತಗಿರಿ ಮಾಡಿ ಆ ವಾಹನಗಳನ್ನು ಅಮಾನತ್ತುಗೊಳಿಸಲಾಗುತ್ತಿದೆ. ವ್ಹೀಲಿಂಗ್ ಮಾಡುವ ಅಪ್ರಾಪ್ತ ಬೈಕ್ ಸವಾರರುಗಳ ವಿರುದ್ಧ ಜ್ಯುವೆನೈಲ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಬಸ್, ಆಟೋ, ಕ್ಯಾಬ್ ಚಾಲಕರುಗಳಿಗೂ ವ್ಹೀಲಿಂಗ್ ಮಾಡುವುದರಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ತಿಳಿಸಿ, ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.

ವ್ಹೀಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗುವ ಬೈಕ್ ಸವಾರರ ಡ್ರೆöÊವಿಂಗ್ ಲೆಸೆನ್ಸ್ ಕಡ್ಡಾಯವಾಗಿ ಅಮಾನತ್ತು ಮಾಡಲು ಮತ್ತು ಬೈಕ್‌ಗಳ ನೋಂದಣಿ ಪುಸ್ತಕ ರದ್ದುಮಾಡಲು ಆರ್‌ಟಿಒಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಸವಾರರ ವಿರುದ್ಧ ಕಾಲಕಾಲಕ್ಕೆ ವಿಶೇಷ ಕಾರ್ಯಾಚರಣೆಯನ್ನೂ ನಡೆಸಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಎಕ್ಸ್ ಮೂಲಕ ಅರಿವು ಮೂಡಿಸುವ ಕಾರ್ಯವನ್ನೂ ನಡೆಸಲಾಗುತ್ತಿದೆ. ವ್ಹೀಲಿಂಗ್‌ನಲ್ಲಿ ಭಾಗಿಯಾಗುವ ವಾಹನಗಳ ಮಾರ್ಪಾಡಿಗೆ ಸಂಬAಧಿಸಿದAತೆ, ವಾಹನಗಳನ್ನು ಮಾರ್ಪಾಡು ಮಾಡುವ ಗ್ಯಾರೇಜ್‌ಗಳು ಹಾಗೂ ಮೆಕ್ಯಾನಿಕ್‌ಗಳ ವಿವರಗಳನ್ನು ಸಂಗ್ರಹಿಸಿ ಅಂತಹ ಗ್ಯಾರೇಜ್‌ಗಳ ಹಾಗೂ ಮೆಕ್ಯಾನಿಕ್‌ಗಳ ವಿರುದ್ಧವೂ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆಯನ್ನೂ ನೀಡಲಾಗಿದೆ.

ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹುಡುಗರು ಆಗಾಗ್ಗೆ ವ್ಹೀಲಿಂಗ್ ಮಾಡುತ್ತಿರುತ್ತಾರೆ. ಅನೇಕ ಬಾರಿ ಇಲ್ಲಿ ಅಪಘಾತಗಳು ಸಂಭವಿಸಿವೆ. ಪೊಲೀಸರು ಕೂಡ ಆಗಾಗ್ಗೆ ಎಚ್ಚರಿಕೆ ಕೊಡುತ್ತಿರುತ್ತಾರೆ. ಆದರೂ ವ್ಹೀಲಿಂಗ್ ಪಿಡುಗು ಮುಂದುವರಿದಿದೆ. ಮಕ್ಕಳಿಗೆ ವಾಹನ ಕೊಡಿಸುವ ಪೋಷಕರ ವಿರುದ್ಧ ಮೊದಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ವ್ಹೀಲಿಂಗ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಆಗಬೇಕು.

ಅನೀಶ್, ಉದ್ಯಮಿ, ಕುಶಾಲನಗರ

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಬಸ್, ಆಟೋ, ಕ್ಯಾಬ್ ಚಾಲಕರುಗಳಿಗೂ ವ್ಹೀಲಿಂಗ್ ಮಾಡುವುದರಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ತಿಳಿಸಿ, ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ವ್ಹೀಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗುವ ಬೈಕ್ ಸವಾರರ ವಿರುದ್ಧ ಪ್ರಕರಣಗಳನ್ನೂ ದಾಖಲಿಸಲಾಗುತ್ತದೆ. ಸವಾರರನ್ನು ದಸ್ತಗಿರಿ ಮಾಡಿ ಆ ವಾಹನಗಳನ್ನು ಅಮಾನತ್ತುಗೊಳಿಸಲಾಗುತ್ತದೆ. ವ್ಹೀಲಿಂಗ್ ಮಾಡುವ ಅಪ್ರಾಪ್ತ ಬೈಕ್ ಸವಾರರುಗಳ ವಿರುದ್ಧ ಜ್ಯುವೆನೈಲ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ಡಾ. ಜಿ. ಪರಮೇಶ್ವರ್, ಗೃಹ ಸಚಿವ