ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಈ ಸಲದ ಬಜೆಟ್ನಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ರಾಜ್ಯ ಸರ್ಕಾರ, ಸಾರ್ವಜನಿಕರಲ್ಲಿ ಸುಸ್ಥಿರ ಜೀವನ ಶೈಲಿಯ ಅರಿವು ಮೂಡಿಸಲು ಸಿಂಗಾಪುರ ಮಾದರಿಯ ಗ್ರೀನ್ ಎಕ್ಸ್ಪೋ ನಿರ್ಮಿಸಲಿದೆ. ಇದಕ್ಕಾಗಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಎನ್ಜಿಇಎಫ್ನ 105 ಎಕರೆ ಪ್ರದೇಶ ಬಳಸಿಕೊಂಡು ಪರಿಸರಸ್ನೇಹಿ ಟೆಕ್ನಾಲಜಿ, ಪರಿಸರ ಸ್ನೇಹಿ ಸಾರಿಗೆ, ಹಸಿರು ಮೂಲಸೌಕರ್ಯ, ಹಸಿರು ನವೋದ್ಯಮಗಳ ಪ್ರಾತ್ಯಕ್ಷಿಕೆ ನೀಡಲಿದೆ. ಅದರಲ್ಲೂ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 8,409 ಕೋಟಿ ರೂ. ಅನುದಾನ.
- ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯ ಒದಗಿಸಲು 6,000 ಕೋಟಿ ರೂ. ವೆಚ್ಚದಲ್ಲಿ 'ಅಮೃತ್ ನಗರೋತ್ಥಾನ' ಯೋಜನೆ ಮುಂದಿನ 3 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು.
- 2021-22ನೇ ಸಾಲಿನಲ್ಲಿ ನಮ್ಮ ಮೆಟ್ರೊ ಹಂತ-2ರಲ್ಲಿ 7.53 ಕಿ.ಮೀ. ಹೆಚ್ಚುವರಿ ಮಾರ್ಗ ಕಾರ್ಯಾರಂಭಿಸಿದ್ದು, 2022-23ನೇ ಸಾಲಿನಲ್ಲಿ 33 ಕಿ.ಮೀ.ಗಳ ಮಾರ್ಗ ಸೇರಿಸಲಾಗುವುದು. ಇದರಿಂದ ಒಟ್ಟಾರೆ 89 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಹೊಂದಿದಂತಾಗುತ್ತದೆ.
- ಬೆಂಗಳೂರು ಮೆಟ್ರೊ ಹಂತ-3 ಯೋಜನೆಯನ್ನು ಅಂದಾಜು 11,250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ವಿಸ್ತೃತ ಯೋಜನಾ ವರದಿಯನ್ನು (ಡಿ.ಪಿ.ಆರ್) ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಕೆ.
- 2022-13ನೇ ಸಾಲಿನಲ್ಲಿ 37 ಕಿ.ಮೀ. ಉದ್ದದ ಸರ್ಜಾಪುರದಿಂದ ಆಗರ, ಕೋರಮಂಗಲ ಮತ್ತು ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 36 ಕಿ.ಮೀ. ಉದ್ದದ ಹೊಸ ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕ್ರಮ.
- ಪಾದಚಾರಿಗಳು ಮತ್ತು ರಸ್ತೆ ಬದಿ ವ್ಯಾಪಾರಿಗಳ ಸುರಕ್ಷತೆ, ಮೆಟ್ರೋ-ಬಸ್ ನಿಲ್ದಾಣ ಸಂಪರ್ಕಕ್ಕಾಗಿ ಬನಶಂಕರಿ ಜಂಕ್ಷನ್ನಲ್ಲಿ 45 ಕೋಟಿ ರೂ. ವೆಚ್ಚದ ಸ್ಕೈ ವಾಕ್.
- ವೈಟ್ಫೀಲ್ಡ್, ಕೆ.ಆರ್.ಪುರ, ಬಯ್ಯಪ್ಪನಹಳ್ಳಿ, ಯಶವಂತಪುರ, ಜ್ನಾನಭಾರತಿ ಮತ್ತು ಯಲಹಂಕ ರೈಲ್ವೆ ನಿಲ್ದಾಣಗಳಲ್ಲಿ ಭಾರತೀಯ ರೈಲ್ವೆಯೊಂದಿಗೆ ಮೆಟ್ರೊ ರೈಲು ನಿಲ್ದಾಣ ಸಂಪರ್ಕಿಸಲು 55 ಕೋಟಿ ರೂ. ವೆಚ್ಚದ ಕಾಮಗಾರಿ.
- ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಬಾಕಿ 1297 ಎಕರೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಆಧುನಿಕ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ.
- ಜಲಮಾಲಿನ್ಯ ತಡೆಗಟ್ಟಲು ನಗರದ ವಿವಿಧ ಸ್ಥಳಗಳಲ್ಲಿರುವ ಹಳೆಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು 1,500 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನ ಮತ್ತು ಉನ್ನತೀಕರಣ.
- ಮಳೆ ನೀರು ಹರಿಯುವಿಕೆಗೆ ಬಹೃತ್ ಮಳೆ ನೀರುಗಾಲುವೆಗಳನ್ನು ಮತ್ತು ಮಳೆ ಸುರಿದಾಗ ಪ್ರವಾಹ ಉಂಟಾಗದಂತೆ ತಡೆಯಲು ರಾಜಾಕಾಲುವೆ ಅಭಿವೃದ್ಧಿಗಾಗಿ 1,500 ಕೋಟಿ ರೂ. ಮೊತ್ತದಲ್ಲಿ ಯೋಜನೆ.
- ರಾಜಧಾನಿಯ ನಾಲ್ಕು ಭಾಗಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ್ಲಲಿ 500 ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
- ಆಯ್ದ 20 ಸರ್ಕಾರಿ ಶಾಲೆಗಳನ್ನು 89 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಪಬ್ಲಿಕ್ ಶಾಲೆಗಳಾಗಿ ಅಭಿವೃದ್ಧಿ.