ಶಿರಸಿ: ಕಲೆಯು ಸಂಸ್ಕೃತಿಗೆ ಪ್ರೇರಕ. ಸಂಸ್ಕೃತಿ ಉಳಿಸುವಂತೆ ಕಲೆ ಇರಬೇಕು ಎಂದು ಪ್ರಸಿದ್ಧ ಯಕ್ಷಗಾನ ಭಾಗವತ, ರಾಜ್ಯೋತ್ಸವ ಪ್ರಶಸ್ತಿ ಪುರಸೃ್ಕ ಕೇಶವ ಹೆಗಡೆ ಕೊಳಗಿ ಹೇಳಿದರು.
ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಕಲಾ ವೈವಿಧ್ಯತೆಗಳ ಸಮಾಗಮ ಸಾಂಸ್ಕೃತಿಕ ಸೌರಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಲೆಯ ಮೂಲಕ ವ್ಯಕ್ತಿಗಳಲ್ಲಿ ನೈತಿಕತೆ ಬಿತ್ತಬೇಕು ಎಂದರು.
ಕಲೆಯಿಂದ ಸಂಸ್ಕೃತಿಗಳ ಉಳಿವು. ಕಲೆಯ ಉಳಿವು ಪ್ರದರ್ಶಗಳಿಂದ ಮಾತ್ರ. ಈ ಕಾರಣದಿಂದ ಕಲಾ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸರ್ಕಾರ ಅನುದಾನ ನೀಡುವುದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಭಾಕರ ಹೆಗಡೆ ಮಾತನಾಡಿ, ಕಲೆ, ಸಂಸ್ಕೃತಿಗಳ ಉಳಿವು ಎಲ್ಲರ ಜವಾಬ್ದಾರಿ ಎಂದರು.
ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ ಹಾಗೂ ಪ್ರಾಚಾರ್ಯ ಶಶಾಂಕ ಹೆಗಡೆ ಮಾತನಾಡಿದರು. ಪ್ರವೀಣ ಮಣ್ಮನೆ ಕಾರ್ಯಕ್ರಮ ನಿರ್ವಹಿಸಿದರು.
ರಾಯಚೂರಿನ ಮಹಾಲಕ್ಷ್ಮೀ ಹಾಗೂ ಸುಧಾಕರ ಬಳಗದಿಂದ ಸುಗಮ ಸಂಗೀತ, ವಿ. ಉಮಾಕಾಂತ ಭಟ್ಟ ಕೆರೇಕೈ, ಜಾನಕಿ ಹೆಗಡೆ ಅವರಿಂದ ಗಮಕ ವಾಚನ, ಗಾಯಕಿ ದೀಪಾ ಶಶಾಂಕ ಹೆಗಡೆ ಅವರಿಂದ ಹಿಂದುಸ್ತಾನಿ ಗಾಯನ, ರಾಜೇಶ್ವರಿ ಹೆಗಡೆ ತಂಡದಿಂದ ಜಾನಪದ ಗೀತೆ, ವಸುಮತಿ ಹೆಗಡೆ ತಂಡದಿಂದ ನೃತ್ಯ ರೂಪಕ, ವಿಘ್ನೕಶ್ವರ ಗೌಡ ತಂಡದಿಂದ ಡೊಳ್ಳು ಕುಣಿತ, ಗಣಪತಿ ಗೌಡ ತಂಡದಿಂದ ಭಜನಾ ಕೋಲಾಟ, ಸಚಿನ್ ಗೌಡ ತಂಡದಿಂದ ಕೋಲಾಟ, ಅನಿರುದ್ಧ ವರ್ಗಾಸರ ತಂಡದಿಂದ ಯಕ್ಷಗಾನ ನಡೆದವು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಗರಾಜ ಜೋಶಿ ನಿರ್ವಹಿಸಿದರು.