ಮೈಸೂರು: ಗ್ರೇಟರ್ ಮೈಸೂರು ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಗಾಲಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿದ್ದು, ಅವರಿಗೆ ಸುಳ್ಳು ಹೇಳೋದೇ ಒಂದು ಚಾಳಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಗ್ರೇಟರ್ ಮೈಸೂರು ರಚಿಸಲು ಕೆಲವು ಮಾನದಂಡಗಳು ಇವೆ. ಗ್ರೇಟರ್ ಮೈಸೂರು ರಚಿಸುವುದು ಕೇಂದ್ರ ಸರ್ಕಾರವೊ? ಅಥವಾ ರಾಜ್ಯ ಸರ್ಕಾರವೊ ಎಂಬ ಸತ್ಯವನ್ನು ಪ್ರತಾಪ್ ಸಿಂಹ ಜನರಿಗೆ ತಿಳಿಸಬೇಕು. ಗ್ರೇಟರ್ ಮೈಸೂರು ರಚಿಸೋದು ಯಾರು ಎಂಬ ಸಾಮಾನ್ಯ ಜ್ಞಾನವೂ ನಿಮಗೆ ಇಲ್ಲವೇ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಗ್ರೇಟರ್ ಮೈಸೂರು ರಚಿಸಲು 200 ಕಿ.ಮೀ. ವಿಸ್ತೀರ್ಣ ಇರಬೇಕು. ಆದರೆ ಮೈಸೂರು ನಗರ ಪಾಲಿಕೆ ವ್ಯಾಪ್ತಿ 128 ಕಿ.ಮೀ. ಮಾತ್ರ ಇದೆ. ನಿಮ್ಮದೇ ಸರ್ಕಾರ ಇದ್ದಾಗ ಗ್ರೇಟರ್ ಮೈಸೂರು ಕುರಿತು ಏತಕ್ಕೆ ಚಕಾರ ಎತ್ತಲಿಲ್ಲ. ಈಗ ನಿಮಗೆ ಗ್ರೇಟರ್ ಮೈಸೂರು ನೆನಪಾ ಯಿತೇ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ಬೇಗ ಗುಣಮುಖವಾಗಲಿ ಎಂದು ತಾಯಿ ಶ್ರೀ ಚಾಮುಂಡೇಶ್ವಯಲ್ಲಿ ಪ್ರಾರ್ಥನೆ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಅವರ ಆರೋಗ್ಯ ವಿಚಾರಿಸಿದ್ದಾರೆ. ರಾಜಕೀಯ ಬೇರೆ, ಮಾನವೀಯತೆ ಬೇರೆ. ಅವರು ರಾಜಕೀಯದಿಂದ ದೂರ ಉಳಿದು ಒಂದು ತಿಂಗಳು ವಿಶ್ರಾಂತಿ ಪಡೆಯುವುದು ಉತ್ತಮ. ಎಲ್ಲದಕ್ಕಿಂತ ಮುಖ್ಯ ಆರೋಗ್ಯ ಎಂದು ಹೇಳಿದರು.
ಕಾವೇರಿ ಮಾನಿಟರಿಂಗ್ ಬೋರ್ಡ್ ರಚಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಇದಕ್ಕೆ ಕೇಂದ್ರ ಸರ್ಕಾರದ ಮುಖ್ಯ ಇಂಜಿನಿಯರ್ ಮುಖ್ಯಸ್ಥರು. ಬೋರ್ಡ್‌ನಲ್ಲಿ ಎಲ್ಲ ರಾಜ್ಯದ ಇಂಜಿನಿಯರ್‌ಗಳು ಇರುತ್ತಾರೆ. ನೀರು ಕೊಡಿ ಅಂತ ಹೇಳಿದವರು ನೀವೇ? ಇದೀಗ ವಿರೋಧಿಸುತ್ತಿರುವವರು ನೀವೇ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮನಗಂಡು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆ ಜಾರಿಗೆ ಹೋರಾಟ ನಡೆಸಿದರು. ಬಿಜೆಪಿಯವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಒಂದುವೇಳೆ ಮೇಕೆದಾಟು ಯೋಜನೆ ಜಾರಿಯಾಗಿದ್ದರೆ ರಾಜ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುತ್ತಿರಲಿಲ್ಲ ಎಂದರು.