Basangouda Patil Yatnal 
ಜಿಲ್ಲೆ

ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್ ಏಜೆಂಟ್‌ರಂತೆ ಕಾರ್ಯನಿರ್ವಹಣೆ, ವಿಜಯೇಂದ್ರಗೆ ಶಾಸಕ ಯತ್ನಾಳ ನೀಡಿದ ಎಚ್ಚರಿಕೆ ಏನು?

ವಿಜಯಪುರ: ಪಕ್ಷದಲ್ಲಿದ್ದುಕೊಂಡು ಕಾಂಗ್ರೆಸ್ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿರುವವರ ಮೇಲೆ ವಿಜಯೇಂದ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಲೆ ದಂಡ ತೆರಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದರು.

ಹಾಸನ, ತುಮಕೂರ, ಬಾಗಲಕೋಟೆಯಲ್ಲಿ ವಿಜಯೇಂದ್ರ ನೇಮಿಸಿದ ಪದಾಧಿಕಾರಿಗಳು ಒಳಗೊಳಗೆ ಕಾಂಗ್ರೆಸ್ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರನ್ನು ಸರಿಯಾಗಿ ಕೆಲಸ ಮಾಡಲು ಹಚ್ಚಬೇಕು. ಇಲ್ಲವಾದಲ್ಲಿ ರಾಜಿನಾಮೆ ತೆಗೆದುಕೊಂಡು ಹೊರ ಹಾಕಬೇಕು ಎಂದು ಮಂಗಳವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತನಗೆ ಬೇಕಾದವರನ್ನೆಲ್ಲ ರಾಜ್ಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮಾಡಿಕೊಂಡಿದ್ದಾನೆ. ಅವರೇ ಪಕ್ಷದ ವಿರುದ್ಧ, ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿದ್ದಾರೆಂಬ ಆರೋಪ ಇದೆ. ಕ್ರಮ ಕೈಗೊಳ್ಳಲಿಲ್ಲ ಎಂದರೆ ವಿಜಯೇಂದ್ರನೇ ತಲೆದಂಡ ತೆರಬೇಕಾಗುತ್ತದೆ ಎಂದ ಯತ್ನಾಳ, ಅವರದ್ದೇ ಕ್ಷೇತ್ರದಲ್ಲಿ ಏನೆಲ್ಲಾ ನಡೆದಿದೆ. ಈಶ್ವಪ್ಪ ಅವರು ಪಕ್ಷದ ಹಿರಿಯರು. ಅವರು ಪಕ್ಷದ ವಿರುದ್ದ ಎಂದೂ ಮಾತನಾಡಿಲ್ಲ. ಅವರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಪಕ್ಷಕ್ಕಾಗಿ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಾರೆ. ಹೀಗಾಗಿ ಮಾತೃ ಹೃದಯದ ಪೂಜ್ಯ ತಂದೆಯವರು, ಮಾತೃ ಹೃದಯದ ಪೂಜ್ಯ ತಂದೆಯವರ ಹಿರಿಯ, ಕಿರಿಯ ಮಗ ಹೀಗೆ ಮೂರು ಜನ ಸೇರಿ ಗೌರವ ಕೊಡುವುದನ್ನು ಕಲಿಯಿರಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ಧ ಚಾಟಿ ಬೀಸಿದರು.

ಅವರ ಲೋಕಸಭೆ ಕ್ಷೇತ್ರದಲ್ಲೇ ಇದೆಲ್ಲ ನಡೆಯುತ್ತಿದೆ. ಹೀಗಾಗಿ ಪಕ್ಷದ ರಾಜ್ಯಾಧ್ಯಕ್ಷ, ಕರ್ನಾಟಕದ ರಾಜಾ ಹುಲಿ ಸೇರಿ ಸರಿ ಮಾಡಬೇಕು ಎಂದರು.