ಹನೂರಿನಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು. ರಾಜೇಂದ್ರ, ಪ್ರಸಾದ್, ಹರೀಶ್, ಬೋಸ್ಕೋ ಇತರರು ಇದ್ದರು. 
ಜಿಲ್ಲೆ

ದನಕರುಗಳ ಮೇವಿಗೆ ಏನು ಮಾಡುವುದು..?

ರವಿಕುಮಾರ್ ಪಿ. ಕೆ

ಹನೂರು: ಅರಣ್ಯ ಪ್ರದೇಶದಲ್ಲಿ ದನಕರುಗಳನ್ನು ಮೇಯಿಸಲು ನಿಷೇಧ ಹೊರಡಿಸುವುದನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕೈ ಬಿಡಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಒತ್ತಾಯಿಸಿದರು.

ಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಬಹುತೇಕ ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ತಾಲೂಕಿನಲ್ಲಿ 1.20 ದೇಸಿ ತಳಿಯ ಹಸುಗಳಿವೆ. ಈ ಹಿಂದೆ ಅರಣ್ಯ ಪ್ರದೇಶದಲ್ಲಿ ದೊಡ್ಡಿಗಳನ್ನು ಹಾಕಿಕೊಂಡು ದನ ಕರುಗಳನ್ನು ಮೇಯಿಸಲಾಗುತ್ತಿತ್ತು. ಇದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ರೈತರು ಅರಣ್ಯ ಸಂರಕ್ಷಣೆಗೂ ಹೆಚ್ಚಿನ ಒತ್ತು ನೀಡಿದ್ದರು. ಅರಣ್ಯ ಪ್ರದೇಶ ಸಮೃದ್ಧಿಯಿಂದ ಕೂಡಿತ್ತು. ಆದರೆ ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಬಗ್ಗೆ ತಿಳಿಯದೇ ಏಕಾಏಕಿ ದನಕರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ನಿಷೇಧ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ..? ದನಕರುಗಳ ಮೇವಿಗೆ ಏನು ಮಾಡುವುದು..? ಈ ರೀತಿ ಆದೇಶ ಹೊರಡಿಸಿರುವುದು ಸರಿಯಲ್ಲ. ಆದ್ದರಿಂದ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನು ಅಧಿಕಾರಿಗಳು ದನಕರುಗಳ ಬಗ್ಗೆ ಸಮೀಕ್ಷೆಯನ್ನು ನಡೆಸದೇ ಈ ಭಾಗದಲ್ಲಿ ತಮಿಳುನಾಡಿನ ಹಸುಗಳನ್ನು ಮೇಯಿಸಲಾಗುತ್ತಿದೆ. ಗೊಬ್ಬರವನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬುದಾಗಿ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಆದರೆ ಇದು ಶುದ್ಧ ಸುಳ್ಳು. ಆದ್ದರಿಂದ ಈ ಭಾವನೆಯನ್ನು ಕೈ ಬಿಡಬೇಕು. ದನಕರುಗಳನ್ನು ಎಂದಿನಂತೆ ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡಬೇಕು. ಒಂದು ವೇಳೆ ನಿಷೇಧ ಮುಂದುವರಿಸಿ ರೈತರು ಹಾಗೂ ದನಕರುಗಳಿಗೆ ಸಮಸ್ಯೆಯಾದಲ್ಲಿ ದನಕರುಗಳನ್ನು ಬೆಂಗಳೂರಿಗೆ ಕರೆದೊಯ್ದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್, ತಾಲೂಕು ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಬೋಸ್ಕೋ, ಮಲ್ಲಿಕಾರ್ಜುನ ಹಾಗೂ ಇನ್ನಿತರರು ಇದ್ದರು.