ಮೈಸೂರು: ಮೈಸೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ ಇದ್ದು, ಅವರ ಹೆಸರನ್ನು ಕೆಆರ್‌ಎಸ್ ರಸ್ತೆಗೆ ಇಡುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೈದ್ಧಾಂತಿಕವಾಗಿ ನಾನು ಇಂದಿಗೂ ಅವರನ್ನು ವಿರೋಧಿಸುತ್ತೇನೆ. ಆದರೆ, ಅವರು ಮೈಸೂರಿನ ಸುಪುತ್ರ. 2ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ರೀತಿಯಲ್ಲಿ ಯಾರಿಗೆ ಸ್ಪಷ್ಟ ಬಹುತದಲ್ಲಿ 2 ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ದೊರೆತ್ತಿದೆ? ಅವರೊಬ್ಬ ಜನಪ್ರೀಯ ಮುಖ್ಯಮಂತ್ರಿ ಹಾಗೂ ಜನಪ್ರೀಯ ರಾಜಕಾರಣಿ. ಕೆಆರ್‌ಎಸ್ ರಸ್ತೆಯಲ್ಲಿ ಅವರ ಅವಧಿಯಲ್ಲಿ ಜಯದೇವ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಂಡಿದೆ. ಹಾಗಾಗಿ ಆ ರಸ್ತೆಗೆ ಅವರ ಹೆಸರು ಇಡಲಾಗುತ್ತಿದೆ ಎಂದರು.
ನಮ್ಮ ದಣಿಗಳಾದ ಮೈಸೂರಿನ ಒಡೆಯರ್‌ಗಳಾದ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಎಲ್ಲ ಕಡೆಗಳಲ್ಲಿ ಇಡಲಾಗಿದೆ. ಅಲ್ಲದೆ, ಮೈಸೂರಿಗೆ ಕೊಡುಗೆ ನೀಡಿದ ವಿಶ್ವೇಶ್ವರಯ್ಯ, ಶೇಷಾದ್ರಿ ಅಯ್ಯರ್, ರಂಗಚಾರ್ಲು ಅವರ ಹೆಸರನ್ನು ಸಹ ಇಡಲಾಗಿದೆ. ಈ ರೀತಿ ಸಾಧಕರ ಹೆಸರನ್ನು ರಸ್ತೆ, ವೃತ್ತಕ್ಕೆ ಇಡುವುದು ತಪ್ಪೇನು ಇಲ್ಲ. ಅದೇ ರೀತಿ ಸಿದ್ದರಾಮಯ್ಯ ಮೈಸೂರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಗರ ಪಾಲಿಕೆ ಸದಸ್ಯರ ಹೆಸರನ್ನು ನಗರದ ದೊಡ್ಡ ವೃತ್ತಗಳು, ರಸ್ತೆಗಳಿಗೆ ಇಡಲಾಗಿದೆ. ಹಾಗಿರುವಾಗ ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? ಪ್ರಜಾತಂತ್ರಕ್ಕೆ ಹೋರಾಡಿದರು ಎಂಬ ಕಾರಣಕ್ಕೆ ನಮ್ಮ ದೇಶದವರು ಅಲ್ಲದೆ ಇದ್ದರೂ ನೆಲ್ಸನ್ ಮಂಡೇಲ ಅವರ ಹೆಸರನ್ನು ಮೈಸೂರಿಗೆ ರಸ್ತೆ ಇಡಲಾಗಿದೆ. ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಅವರ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು ಇಲ್ಲ ಎಂದರು.
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ‘ಮೊಸರಲ್ಲಿ ಕಲ್ಲು ಹುಡುಕಿದ ರೀತಿ’. ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಮಾತ್ರ ಸಾಧಕರು ಇರಬೇಕು ಎಂದೇನು ಇಲ್ಲ, ಕಾಂಗ್ರೆಸ್‌ನಲ್ಲೂ ಸಾಧಕರು ಇದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ನಿಜಲಿಂಗಪ್ಪ, ಜೆ.ಎಚ್. ಪಟೇಲ್ ಅವರು ಸಾಧನೆ ತೋರಿದ್ದಾರೆ. ಇಂತಹ ಸಾಧಕರ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು ಎಂದು ಪ್ರಶ್ನಿಸಿದರು.