ಗುಬ್ಬಿ: ಕೇವಲ ಮೂರರಿಂದ ನಾಲ್ಕು ತಿಂಗಳು ಮಾತ್ರ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಅಧಿಕಾರವಿದೆ. ಇಂತಹ ಸಂದರ್ಭದಲ್ಲಿ ಅಧ್ಯ, ಉಪಾಧ್ಯ, ಸದಸ್ಯರಿಗೆ ಮಾಹಿತಿ ಕಾರ್ಯಗಾರ ಮಾಡುತ್ತಿದ್ದೀರಿ! ಇದರಿಂದ ಏನು ಪ್ರಯೋಜನವಾಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಖಾರವಾಗಿ ಪ್ರಶ್ನಿಸಿದರು.
ಪಟ್ಟಣದ ಕಲ್ಯಾಣ ಮಂಟಪದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂನಿಂದ ಗ್ರಾಪಂ ಅಧ್ಯರು, ಉಪಾಧ್ಯರು, ಸದಸ್ಯರು, ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನದಲ್ಲಿ ಸ್ಥಳಿಯ ಆಡಳಿತಕ್ಕೆ ಇರುವ ಶಕ್ತಿ ದೊಡ್ಡದು. ಅದನ್ನು ತಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಬೇಕು ಎಂದರೆ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಜನಪ್ರತಿನಿಧಿಗಳು ಎಲ್ಲ ರೀತಿಯ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರು.
ಪುಸ್ತಕ ಬಿಡುಗಡೆ, ಗ್ರಾಮ ಪಂಚಾಯಿತಿಯ ಅಧ್ಯರು, ಉಪಾಧ್ಯರು, ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ. ಮಧ್ಯಾಹ್ನದ ಮೇಲೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ಆಯೋಜಿಸಲಾಯಿತು.
ಸರ್ಕಾರದ ವಿರುದ್ಧ ಅಸಮಾಧಾನ
ಗ್ರಾಪಂ ಭಾಗದಲ್ಲಿ ಒಂದೇ ಒಂದು ಮನೆಗಳನ್ನು ನೀಡಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರವೂ ನೀಡಿಲ್ಲ, ಹಿಂದಿನ ಸರ್ಕಾರವೂ ನೀಡಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ನಿಮಗೆ( ಗ್ರಾಪಂ ಆಡಳಿತ) ಸಾರ್ವಜನಿಕರು ಚೆನ್ನಾಗಿಯೇ ಪೂಜೆ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ನಾನು ಸಹ ಸಂಬಂಧಪಟ್ಟ ಸಚಿವರಿಗೆ ತಾಲೂಕಿಗೆ 4,000 ಮನೆಗಳನ್ನು ಮಂಜೂರು ಮಾಡುವಂತೆ ಮನವಿ ಮಾಡುತ್ತಲೇ ಇದ್ದೇನೆ ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ವಾಸು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯರು ಗರಂ
ಜಿಪಂ ಸಿಇಒ ಕಾರ್ಯಾಗಾರಕ್ಕೆ ಆಗಮಿಸಿಲ್ಲ. ನಾವು ಸಾಕಷ್ಟು ಪ್ರಶ್ನೆಗಳನ್ನು ಅವರಿಗೆ ಕೇಳಬೇಕಿತ್ತು. ಕಳೆದ ವರ್ಷವೂ ಇದೇ ರೀತಿ ಗಲಾಟೆ ಆಗಿತ್ತು. ನಮ್ಮನ್ನು ಕರೆದು ಊಟ ಹಾಕಿ ಕಳುಹಿಸಲು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಗ್ರಾಪಂ ಸದಸ್ಯರು ಗರಂ ಆದರು.