ದೊಡ್ಡಬಳ್ಳಾಪುರ : ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಜೂ.19ರಂದು ನಡೆಯುವ ಸಚಿವ ಸಂಪುಟ ಸಭೆಯನ್ನು ಬಯಲು ಸೀಮೆ ಪ್ರದೇಶದ ಯಾವುದಾದರೂ ಒಂದು ಕುಗ್ರಾಮದಲ್ಲಿ ಮಾಡಿದ್ದರೆ ಆ ಪ್ರದೇಶವಾದರೂ
ಅಭಿವೃದ್ಧಿ ಆಗುತ್ತಿತ್ತು. ಈಗ ನಂದಿಬೆಟ್ಟದಲ್ಲಿ ಸಭೆ ಮಾಡಿದರೆ ಏನು ಪ್ರಯೋಜನ ಎಂದು ರೈತ ಸಂದ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಬಂದ ಕೂಡಲೇ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನ 5 ರೂ.ಗಳಿಂದ 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಎರಡೂ ವರ್ಷ ಕಳೆದರೂ ಜಾರಿಯಾಗಿಲ್ಲ. ಇದೇ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ಬಯಲುಸೀಮೆ ಸಮಸ್ಯೆಗಳಿಗೆ ಒತ್ತು ನೀಡಬೇಕು. ಬೆಂಗಳೂರಿನ ಜನತೆಗೆ ನಮ್ಮ ಭಾಗದ ರೈತರು ಬೆಳೆಯುವ ತರಕಾರಿ, ಹಣ್ಣು, ಹಾಲು ಸರಬರಾಜು ಆಗುತ್ತಿದೆ. ಇಂತಹ ಫಲವತ್ತಾದ ಭೂಮಿಯನ್ನು ಕೆಐಎಡಿಬಿಗೆ ನೀಡಿ ರೈತರನ್ನು ಬೀದಿಗೆ ತರಲಾಗುತ್ತಿದೆ. ಅಭಿವೃದ್ಧಿ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ನೆಲಮಂಗಲದಿಂದ ದಾಬಸ್ಪೇಟೆವರೆಗೆ, ಯಲಹಂಕದಿಂದ ದೊಡ್ಡಬಳ್ಳಾಪುರದವರೆಗೆ, ಹೊಸಕೋಟೆ, ದೇವನಹಳ್ಳಿ ಸೇರಿ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಸರ್ಕಾರ ಕೈಗಾರಿಕಾಭಿವೃದ್ಧಿ ಹೆಸರಲ್ಲಿ ಭೂಮಿ ಕಸಿದುಕೊಳ್ಳುತ್ತಿದೆ. ಇದನ್ನು ಕೈಬಿಡಬೇಕು. ಹೀಗೆ ಮುಂದುವರಿದರೆ ಕೃಷಿ, ಹೈನುಗಾರಿಕೆ ಸಂಪೂರ್ಣ ನಶಿಸುತ್ತದೆ. ಜಿಲ್ಲೆಯಲ್ಲಿ ಕೃಷಿ ಭೂಮಿ ಕಣ್ಮರೆಯಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಹಾರ ಕೊರತೆ ಎದುರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಫಲವತ್ತಾದ ಭೂಮಿಗೆ ಕೈಹಾಕಬಾರದು ಎಂದು ಒತ್ತಾಯಿಸಿದರು.
ಮನವಿಗೆ ಅವಕಾಶ ನೀಡಿ: ನಮ್ಮೆಲ್ಲ ಬೇಡಿಕೆಗಳನ್ನು ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಈಡೇರಿಸಬೇಕು. ಇದರ ಬಗ್ಗೆ ಸಿಎಂಗೆ ಮನವಿ ಮಾಡಿಕೊಡಲು ಜಿಲ್ಲಾಡಳಿತ ನಮಗೆ ಅವಕಾಶ ಮಾಡಿ ಕೊಡಬೇಕು. ಇಲ್ಲವಾದಲ್ಲಿ ನಾವು ಹೇಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಪ್ರಸನ್ನ ಹೇಳಿದರು.
ವೃಷಭಾವತಿ ಸಂಸ್ಕರಿತ ನೀರು ಬೇಡ: ದೊಡ್ಡಬಳ್ಳಾಪುರಕ್ಕೆ ಉದ್ದೇಶಿತ ಯೋಜನೆಯಾದ ವೃಷಭಾವತಿ ಸಂಸ್ಕರಿತ ನೀರು ತರುವುದು ಬೇಡ. ಹಾಲಿ ಕಾಮಗಾರಿ ಪ್ರಗತಿಯಲ್ಲಿರುವ ಎತ್ತಿನಹೊಳೆ ನೀರು ಅಥವಾ ಕಾವೇರಿ ನೀರನ್ನು ಮಾತ್ರ ನಮ್ಮ ತಾಲೂಕಿಗೆ ನೀಡಬೇಕು ಎಂದು ರೈತ ಸಂದ ತಾಲೂಕು ಅಧ್ಯಕ್ಷ ಹನುಮೇಗೌಡ ತಿಳಿಸಿದರು.
ಶಾಶ್ವತ ನೀರಾವರಿಗೆ ಒತ್ತಾಯ : ಶಾಶ್ವತ ನೀರಾವರಿಗಾಗಿ ಬಯಲು ಸೀಮೆ ಜಿಲ್ಲೆಯಲ್ಲಿ ಹಲವು ಹೋರಾಟಗಳು ನಡೆದಿವೆ. ಆದರೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಎತ್ತಿನಹೊಳೆ ಯೋಜನೆ ದಿಕ್ಕು ತಪ್ಪಿದ್ದು, ಜಿಲ್ಲೆಗಳಿಗೆ ನೀರು ಸಿಗುವ ನಿರೀೆಯೇ ಇಲ್ಲ. ಈ ಯೋಜನೆ ಸರ್ಕಾರದ ಪಾಲಿಗೆ ಬಂಗಾರದ ಬಟ್ಟಲಾಗಿದೆ. ಪೈಪ್ಲೈನ್ ಅಳವಡಿಸಿರುವ ರೈತರಿಗೂ ಸೂಕ್ತ ಪರಿಹಾರ ಧನ ನೀಡಿಲ್ಲ. ತಾಲೂಕಿನ ಬೈರಗೊಂಡ್ಲು ಭಾಗದಲ್ಲಿ 10 ಟಿಎಂಸಿ ಡ್ಯಾಂ ನಿರ್ಮಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಈಗ 2 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ. ರೈತರು ಬೆಳೆಯುವ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಭದ್ರತೆ ನೀಡಬೇಕು ಎಂದು ಜಿಲ್ಲಾಧ್ಯಕ್ಷ ಪ್ರಸನ್ನ ಒತ್ತಾಯಿಸಿದರು.