* ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ತರಹೇವಾರಿ ಚರ್ಚೆ
* ಟಿಕೆಟ್ ದಕ್ಕದಿದ್ದರೂ ಚುನಾವಣೆಯಲ್ಲಿ ಸ್ಪರ್ಧೆಗೆ ನಿರ್ಧಾರ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಉಪಕದನದ ಪ್ರಬಲ ಸ್ಪರ್ಧಾಕಾಂ ಆಗಿರುವ ಸಿ.ಪಿ.ಯೋಗೇಶ್ವರ್ ಅವರ ನಡೆಯೇನು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ತರಹೇವಾರಿ ಚರ್ಚೆಗಳು ಆರಂಭಗೊಂಡಿವೆ.
ಮುಂಬರುವ ಉಪಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲೇಬೇಕು ಎಂಬುದು ಯೋಗೇಶ್ವರ್ ಮನದಿಂಗಿತವಾಗಿದೆ. ಟಿಕೆಟ್ ದಕ್ಕದಿದ್ದರೂ ಸ್ಪರ್ಧಿಸುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಮೈತ್ರಿ ಪಕ್ಷದ ಟಿಕೆಟ್ ದಕ್ಕದಿದ್ದರೆ ಯೋಗೇಶ್ವರ್ ಆರಿಸಿಕೊಳ್ಳುವ ಪರ್ಯಾಯ ಮಾರ್ಗ ಯಾವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯಲಿದ್ದು, ಮೈತ್ರಿ ಧರ್ಮಪಾಲನೆ ಹಿನ್ನೆಲೆಯಲ್ಲಿ ಮೂರರ ಪೈಕಿ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಪಾಲಾಗುತ್ತದೆ ಎನ್ನಲಾಗಿದೆ. ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರವಾಸ ನಡೆಸುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ. ಇದರ ಮಧ್ಯೆಯೂ ಟಿಕೆಟ್ಗಾಗಿ ಯೋಗೇಶ್ವರ್ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮೈತ್ರಿ ಪಾಲನೆಯ ಹೊರತಾಗಿಯೂ ಕ್ಷೇತ್ರದ ಟಿಕೆಟ್ ನನಗೆ ಸಿಗಲಿದೆ ಎಂಬ ಅದಮ್ಯ ವಿಶ್ವಾಸದಲ್ಲಿದ್ದಾರೆ. ಟಿಕೆಟ್ ಗಿಟ್ಟಿಸಿಕೊಳ್ಳಲು ನಾನಾ ಪ್ರಯತ್ನ ನಡೆಸುತ್ತಿದ್ದಾರೆ. ಸೋಮವಾರ ಸಂಜೆ ಮತ್ತೊಮ್ಮೆ ದೆಹಲಿಗೂ ತೆರಳುತ್ತಿದ್ದಾರೆ. ತಮ್ಮ ಆಪ್ತ ಮುಖಂಡರ ಮೂಲಕ ಪದ ವರಿಷ್ಠರಿಗೆ ಒತ್ತಡ ಹಾಕಿಸುತ್ತಿದ್ದಾರೆ. ಇದರ ಹೊರತಾಗಿಯೂ, ಟಿಕೆಟ್ ಸಿಗದಿದ್ದರೆ ಮುಂದಿನ ದಾರಿಯೇನು? ಎಂಬ ಚಿಂತನೆಯಲ್ಲಿದ್ದಾರೆ. ಇದಕ್ಕಾಗಿ ಪದ ಮುಖಂಡರು ಹಾಗೂ ಕಾರ್ಯಕರ್ತರ ಮೊರೆ ಹೋಗಿದ್ದಾರೆ.
ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ನೂರಕ್ಕೆ ನೂರು ಖಚಿತ ಎಂಬ ನಿರ್ಧಾರವನ್ನು ಯೋಗೇಶ್ವರ್ ಈಗಾಗಲೇ ಘೋಷಿಸಿದ್ದಾರೆ. ಒಂದುವೇಳೆ ಮೈತ್ರಿ ಟಿಕೆಟ್ ವಂಚಿತವಾದರೆ ಮುಂದಿನ ದಾರಿ ಆಯ್ಕೆಗೆ ಈಗಾಗಲೇ ಅರ್ಲಟ್ ಆಗಿದ್ದಾರೆ. ಇದಕ್ಕಾಗಿ ಕಳೆದ ಬುಧವಾರದಿಂದ ನಗರದ ಐದನೇ ಅಡ್ಡ ರಸ್ತೆಯಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಪದ ಮುಖಂಡರು ಹಾಗೂ ಕಾರ್ಯಕರ್ತರ ಜತೆ ನಿರಂತರವಾದ ಸಭೆ ನಡೆಸುತ್ತಿದ್ದಾರೆ. ಗ್ರಾಪಂವಾರು ಮುಖಂಡರನ್ನು ಕರೆದು ಈ ಬಗ್ಗೆ ವಿಸತವಾದ ಚರ್ಚೆ ಮಾಡುತ್ತಿದ್ದಾರೆ. ಅಪ್ಪಿತಪ್ಪಿ ಟಿಕೆಟ್ ಸಿಗದಿದ್ದರೆ ಏನು ಮಾಡೋಣ ಎಂಬ ಸಲಹೆಯನ್ನು ಕೇಳುತ್ತಿದ್ದಾರೆ. ಈಗಾಗಲೇ ಬಹುತೇಕ ಗ್ರಾಪಂಗಳ ಸಭೆ ಮುಕ್ತಾಯವಾಗಿವೆ. ಆದರೆ, ಈ ಸಭೆಯಲ್ಲೂ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ.
ನಿಮಗೆ ಟಿಕೆಟ್ ಕೊಡುವುದಿಲ್ಲ ಎನ್ನುವುದಾದರೆ ಕಾಂಗ್ರೆಸ್ ಸೇರುವುದು ಉತ್ತಮ..., ಕಾಂಗ್ರೆಸ್ಗೆ ಹೋದರೆ ಗೆಲುವು ಸುಲಭ..., ನಿಮ್ಮನ್ನು ದುಡಿಸಿ ಕೈ ಕೊಟ್ಟವರಿಗೆ ಬುದ್ದಿ ಕಲಿಸಲು ಕಾಂಗ್ರೆಸ್ಸೇ ಸರಿ.., ಇಲ್ಲವಾದರೆ, ಪೇತರರಾಗಿ ನಿಂತುಕೊಳ್ಳಿ, ಎರಡು ಪಗಳಿಗೂ ಮಣ್ಣು ಮುಕ್ಕಿಸೋಣ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಿ, ನಾವು ನಿಮ್ಮ ಜತೆ ಇರುತ್ತೇವೆ. ಇವು, ಯೋಗೇಶ್ವರ್ ನಡೆಸುತ್ತಿರುವ ಗ್ರಾಪಂವಾರು ಮುಖಂಡರ ಸಭೆಗಳಲ್ಲಿ ಕೇಳಿ ಬರುತ್ತಿರುವ ಮಾತುಗಳು. ಬಲ್ಲಮೂಲಗಳ ಪ್ರಕಾರ ಯೋಗೇಶ್ವರ್ ನಡೆಸುತ್ತಿರುವ ಸಭೆಯಲ್ಲಿ ಬಹುತೇಕರು ಕಾಂಗ್ರೆಸ್ ಸೇರಲು ಸಲಹೆ ನೀಡುತ್ತಿದ್ದಾರೆ ಎನ್ನಲಾಗಿದ್ದು, ಕೆಲವೇ ಮಂದಿ ಮಾತ್ರ ಪೇತರರಾಗಲು ಸೂಚಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಯೋಗೇಶ್ವರ್ ಮಾತ್ರ ನನಗೆ ಮೈತ್ರಿಯಲ್ಲಿಯೇ ಟಿಕೆಟ್ ಸಿಗಲಿದೆ. ಟಿಕೆಟ್ ತಪ್ಪಿದರೆ ಎರಡರಲ್ಲಿ ಒಂದನ್ನು ಆರಿಸಿಕೊಳ್ಳೋಣ ಎಂಬ ನಿಲುವಿಗೆ ಬದ್ಧರಾಗಿದ್ದಾರೆ ಎನ್ನಲಾಗಿದೆ.
ದೆಹಲಿಯಿಂದ ಬಂದ ಬಳಿಕ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದೆ. ಯೋಗೇಶ್ವರ್ ಮೈತ್ರಿ ಟಿಕೆಟ್ಗೆ ತೀವ್ರ ಆಸಕ್ತಿ ತೋರಿಸುತ್ತಿದ್ದು, ಟಿಕೆಟ್ ಸಿಗುವುದೋ? ಇಲ್ಲವೋ ಎಂಬುದು ದೆಹಲಿಯಲ್ಲಿ ಖಾತ್ರಿಯಾಗಲಿದೆ ಎನ್ನಲಾಗಿದೆ. ಒಂದುವೇಳೆ ಟಿಕೆಟ್ ಕೈ ತಪ್ಪಿದರೆ ಯಾವುದಾದರೂ ರಾಷ್ಟ್ರೀಯ ಪಕ್ಷ ಚಿಹ್ನೆಯಡಿ ಸ್ಪರ್ಧೆ ಖಚಿತ ಎಂಬ ಮಾಹಿತಿ ಬಲ್ಲಮೂಲಗಳಿಂದ ಕೇಳಿಬಂದಿದೆ.