ಜಿಲ್ಲೆ

ಲಾಕ್​ಡೌನ್ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಿಎಸ್​ವೈ ಏನು ಹೇಳಿದ್ರು ಗೊತ್ತ?

Mysuru Rural

ಬೆಂಗಳೂರು: ಕರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರು ಕರೆ ನೀಡಿರುವ ಲಾಕ್‍ಡೌನ್‍ನ ಅವಧಿಯನ್ನು ನಾಗರಿಕರು ಅದನ್ನು ಎಷ್ಟು ಕಟ್ಟುನಿಟ್ಟಿನಿಂದ ಪಾಲನೆ ಮಾಡುತ್ತಾರೆ ಎಂಬುದರ ಮೇಲೆ ಅದರ ವಿಸ್ತರಣೆ ಅಥವಾ ಸ್ಥಗಿತಗೊಳಿಸುವಿಕೆ ಅವಲಂಬಿಸಿದೆ. ಆದ್ದರಿಂದ ನಾಡಿನ ಜನತೆ ಲಾಕ್‍ಡೌನ್‍ಅನ್ನು ನಮ್ಮೆಲ್ಲರ ಒಳಿತಿಗಾಗಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

“ಕರ್ನಾಟಕದ ಜನತೆ ಶಿಸ್ತಿಗೆ ಮತ್ತು ಕಾನೂನು ಪಾಲನೆಗೆ ಹೆಸರಾದವರು. ಕರ್ನಾಟಕ ಒಂದು ಕಲ್ಯಾಣ ರಾಜ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಶಿಸ್ತು ಪಾಲನೆ ಮಾಡಬೇಕಾಗಿರುತ್ತದೆ. ಕರೋನಾ ವೈರಸ್ ನಮ್ಮ ತಾಳ್ಮೆಯನ್ನು ಪರೀಕ್ಷಿಸಲೆಂದೇ ಬಂದ ಒಂದು ವಿಪತ್ತು ಎಂದು ಭಾವಿಸಿದ್ದೇನೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ 21 ದಿನಗಳ ಕಾಲ ಲಾಕ್‍ಡೌನ್ ವಿಧಿಸಿರುವ ಅನಿವಾರ್ಯ ಪರಿಸ್ಥಿತಿಯಿಂದಾಗಿ ಇಡೀ ದೇಶದ ಜನತೆಯ ಕ್ಷಮೆಯನ್ನು ಕೇಳಿದ್ದಾರೆ. ಒಬ್ಬ ಪ್ರಧಾನಮಂತ್ರಿ ದೇಶದ ಜನತೆಯ ಕ್ಷಮೆ ಕೇಳುವ ಅನಿವಾರ್ಯತೆ ಇದೆಯೆಂದರೆ ಪರಿಸ್ಥಿತಿಯ ಗಂಭೀರತೆಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ದೇಶಕ್ಕೆ ಯಾಕೆ ಜಗತ್ತಿನ ಇತಿಹಾಸದಲ್ಲಿಯೇ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಈಗ ಇಂತಹ ಪರಿಸ್ಥಿತಿ ಬಂದಿದೆ ಎಂದರೆ ಅದನ್ನು ನಾವು ಎದುರಿಸಲೇಬೇಕಾಗಿದೆ.

ಜನಹಿತಕ್ಕಾಗಿ ಕಠಿಣ ನಿರ್ಧಾರ: ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ತೀವ್ರತರವಾದ ಪರಿಣಾಮ ಈ ವೈರಾಣು ಬೀರಲಿದೆ ಎಂದು ಫ್ರಧಾನಿಗೆ ಗೊತ್ತಿದ್ದರೂ ದೇಶವನ್ನು ಲಾಕ್‍ಡೌನ್ ಮಾಡುವಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ದೇಶದ ಜನತೆಯ ಹಿತದೃಷ್ಟಿಯಿಂದಲೇ ಹೊರತು ಯಾವುದೇ ಸ್ವಹಿತಾಸಕ್ತಿಯಿಂದಲ್ಲ.

ಅಭಿವೃದ್ಧಿ ಹೊಂದಿದ ದೇಶಗಳ ಸಾಧನೆ ಕೋವಿಡ್-19 ನ್ನು ನಿಯಂತ್ರಿಸುವಲ್ಲಿ ಶೋಚನೀಯವಾಗಿರುವಾಗ ಮೋದಿಯವರ ಮುನ್ನೆಚ್ಚರಿಕೆ ಕ್ರಮಗಳು ಫಲಿತಾಂಶವನ್ನು ನೀಡುತ್ತಿವೆ ಮತ್ತು ದೇಶವು ಅವರ ಮತ್ತು ಅವರ ದೂರದೃಷ್ಟಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತಿದೆ. ನಾವು ಅವರ ಕೆಲಸದ ಬಗ್ಗೆ ಮೆಚ್ಚುಗೆ ಮತ್ತು ಹೆಮ್ಮೆ ಪಡುವುದು ಮಾತ್ರವಲ್ಲದೇ ಅವರ ಆಜ್ಞೆಯನ್ನು ಪಾಲಿಸುವಲ್ಲಿ ನಮ್ಮ ಗೌರವ ಅಡಗಿದೆ. ಜಾಗೃತ ನಾಗರಿಕರಾದ ನಾವೆಲ್ಲ ಪ್ರಧಾನಮಂತ್ರಿಯವರ ಈ ದಿಟ್ಟ ನಿಲುವನ್ನು ಮತ್ತು ನಿರ್ಧಾರವನ್ನು ಬೆಂಬಲಿಸಬೇಕಾಗಿದೆ. ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಕೆಲವು ನಗರ ಪ್ರದೇಶಗಳಲ್ಲಿನ ಜನತೆ ಕಫ್ರ್ಯೂ ಧಿಕ್ಕರಿಸಿ ರಸ್ತೆಗಳಲ್ಲಿ ಓಡಾಡುವುದು ಮಾಡುತ್ತಿದ್ದಾರೆ.ಈ ಸಮಯದಲ್ಲಿ ನನ್ನ ಕಳಕಳಿಯ ಮನವಿ ಏನೆಂದರೆ, ಎಲ್ಲರೂ ಪ್ರಧಾನಿ ಕರೆಗೆ ಬೆಲೆ ಕೊಡಿ ಮತ್ತು ಲಾಕ್‍ಡೌನ್ ಪಾಲಿಸಿ. ಪೊಲೀಸರು ಕೂಡ ನಿಮ್ಮ ಹಿತವನ್ನೇ ಬಯಸುವವರು. ಅವರೇನು ನಿಮ್ಮ ವೈರಿಗಳಲ್ಲ. ಪೊಲೀಸರಿಗೆ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ.

ಇನ್ನೂ 16 ದಿನಗಳು ನಿಮ್ಮ ಮನೆಯಲ್ಲಿಯೇ ಇರಿ. ಮನೆಯವರೊಂದಿಗೆ ಕಾಲ ಕಳೆಯಲು ನಿಮಗೆ ಒದಗಿ ಬಂದ ಒಂದು ಸದಾವಕಾಶ ಎಂದು ಭಾವಿಸಿ. ನೀವು ಎಷ್ಟು ಮನೆಯ ಒಳಗಡೆ ಇರುತ್ತೀರೋ ಅದರಿಂದ ನಿಮಗೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ. ಪುಸ್ತಕಗಳನ್ನು ಓದಿರಿ. ಬಡವರು ಕೂಡ ನೀವಿದ್ದ ಸ್ಥಳದಲ್ಲಿಯೇ ಸಕಾರಾತ್ಮಕ ಸದಾಕಾಲ ಚಟುವಟಿಕೆಗಳಲ್ಲಿ ಕಾಲ ಕಳೆಯಿರಿ. ಈ ಸಂದರ್ಭದಲ್ಲಿ ಕೊರೋನಾ ವೈರಸ್ ಪೀಡಿತ ನೂರಾರು ಜನರ ಪ್ರಾಣ ಉಳಿಸಲು ಸತತವಾಗಿ ಕೆಲಸದಲ್ಲಿ ತೊಡಗಿರುವ ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿ ಮತ್ತು ನಾಗರಿಕ ಸೇವೆಯಲ್ಲಿ ತೊಡಗಿರುವ ಸಾವಿರಾರು ಕಾರ್ಯಕರ್ತರಿಗೆ ನಾವುಗಳು ನೈತಿಕ ಬೆಂಬಲ ವ್ಯಕ್ತಪಡಿಸಿ ಅವರಿಗೆ ಮನೋಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

ಲಾಕ್‍ಡೌನ್ ಬೇಗ ಮುಗಿಯಲು ಕಟ್ಟುನಿಟ್ಟಿನ ಪಾಲನೆ ಅಗತ್ಯ ನಿಮ್ಮ ಆಹಾರ, ಊಟಕ್ಕೆ ತೊಂದರೆಯಾಗದಂತೆ ಸರಕಾರ ಎಚ್ಚರವಹಿಸಿದೆ. ಯಾವುದೇ ಸುಳ್ಳು ಸುದ್ದಿಗಳಿಗೆ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ. ನೀವು ಎಷ್ಟು ಕಟ್ಟುನಿಟ್ಟಿನಿಂದ ಮನೆಯಲ್ಲಿ ಇರುವುದನ್ನು ಪಾಲಿಸುತ್ತೀರೋ ಅಷ್ಟು ಬೇಗ ಅಂದರೆ ಏಪ್ರಿಲ್-14 ಕ್ಕೆ ಲಾಕ್‍ಡೌನ್ ಮುಗಿಯುವುದು. ಲಾಕ್‍ಡೌನ್ ಪರಿಸ್ಥಿತಿ ನಿಮ್ಮ ಕರ್ಫ್ಯೂ ಪಾಲನೆ ಮೇಲೆ ಅವಲಂಬಿತವಾಗಿದೆ. ಇನ್ನೊಮ್ಮೆ ನಿಮ್ಮೆಲ್ಲರಲ್ಲಿ ಮನವಿ ಏನೆಂದರೆ ಕಟ್ಟುನಿಟ್ಟಾಗಿ ಕರ್ಫ್ಯೂ ಪಾಲಿಸಿ. ಜತೆಗೆ ಲಾಕ್‍ಡೌನ್ ಕೊನೆಗೊಳ್ಳಲು ಅವಕಾಶ ಕೊಡಿ” ಎಂದು ಸಿಎಂ ಕೋರಿದ್ದಾರೆ.