ಜಿಲ್ಲೆ

ಬಾಜಿ ಕಟ್ಟಲು ನಾನಾ ಲೆಕ್ಕಾಚಾರ!

ಊಹೆಗೆ ನಿಲುಕದ ಲಿತಾಂಶ

ಬೆಟ್ಟಿಂಗ್​ ಶೂರರಿಗೆ ತಲೆಬೇನೆ

ಗಂಗಾಧರ್​ ಬೈರಾಪಟ್ಟಣ ರಾಮನಗರ

ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಮತದಾನ ಮುಗಿದಿದೆ. ಇದರಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದ ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಈಗ ಬೆಟ್ಟಿಂಗ್​ ಶೂರರ ಹಾಟ್​ ಫೇವರಿಟ್​.

ಆದರೆ, ಇಲ್ಲಿನ ಲಿತಾಂಶದ ಲೆಕ್ಕಾಚಾರ ಊಹೆಗೆ ನಿಲುಕದೆ ಇರುವುದು ಇವರ ತಲೆ ಬೇನೆ ಹೆಚ್ಚಿಸಿದೆ.

ಹಣ ಮಾಡುವ ಪ್ರಮುಖ ಅಸವಾಗಿರುವ ಬಾಜಿ ಕಟ್ಟುವ ಆಟದಲ್ಲಿ ಚುನಾವಣೆ ಹೊರತಾಗಿಲ್ಲ. ಕ್ರಿಕೆಟ್​ನಲ್ಲಿ ಪ್ರತಿ ಟಾಸ್​ನಿಂದ ಆರಂಭಗೊಂಡು, ಪ್ರತಿ ಬಾಲ್​ನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್​ ನಡೆಯುತ್ತದೆ. ಅದೇ ರೀತಿ ಈ ಚುನಾವಣೆಯಲ್ಲಿಯೂ ಬೂತ್​ನಿಂದ ಆರಂಭಗೊಂಡು, ಚನ್ನಪಟ್ಟಣದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವುದರ ಜತೆಗೆ ಉಳಿದ ಎರಡು ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ ಲಭಿಸಲಿದೆ ಎನ್ನುವ ಹಂತಕ್ಕೂ ಬಾಜಿ ಶುರುವಾಗಿದೆ. ಆದರೆ, ಚನ್ನಪಟ್ಟಣದ್ದೇ ಯಕ್ಷ ಪ್ರಶ್ನೆ.

ಊಹೆಗೆ ನಿಲುಕುತ್ತಿಲ್ಲ

ಜಿದ್ದಾ ಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಲಾಗಿದೆ. ಹೇಗಾದರೂ ಸರಿ ಗೆಲುವು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದು ಚುನಾವಣೆ ನಡೆಸಿದ್ದಾರೆ. ಆದರೆ ಲಿತಾಂಶದ ಮೇಲೆ ಯಾರಿಗೂ ನಂಬಿಕೆ ಇಲ್ಲ. ಮೇಲ್ನೋಟಕ್ಕೆ ಗೆಲುವು ತಮ್ಮದೆ ಎಂದು ಬೀಗುತ್ತಿದ್ದರೂ, ಒಳಗಿನ ಲೆಕ್ಕಾಚಾರ ಸರಿಯಾಗಿ ಆಗುತ್ತಿಲ್ಲ.

ನಿಖಿಲ್​ ಹಾಟ್​ ಫೇವರಿಟ್​

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಯಾರಿಗೆ ಎನ್ನುವ ಲೆಕ್ಕಾಚಾರದಲ್ಲಿ ನಿಖಿಲ್​ ಮೇಲೆಯೇ ಎಲ್ಲರ ವಿಶ್ವಾಸ ಹೆಚ್ಚಿದೆ. ಕಾರಣ ಕಳೆದ ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವ ನಿಖಿಲ್​ಗೆ ಈ ಬಾರಿ ಚನ್ನಪಟ್ಟಣದ ಜನತೆ ಗೆಲುವಿನ ಹಾರ ತೊಡಿಸುತ್ತಾರೆ ಎನ್ನುವ ವಿಶ್ವಾಸವೂ ಇದೆ. ಈ ಕಾರಣದಿಂದ ಕಾಂಗ್ರೆಸ್​ ಅಭ್ಯರ್ಥಿ ಯೋಗೇಶ್ವರ್​ ಅವರಿಗಿಂತ ನಿಖಿಲ್​ ಗೆಲುವಿನ ಮೇಲೆಯೇ ಹೆಚ್ಚು ಹಣ ಹೂಡಲು ಬಾಜೀದಾರರು ಮುಂದಾಗಿದ್ದಾರೆ.

ಜತೆಗೆ ಚನ್ನಪಟ್ಟಣ ಜೆಡಿಎಸ್​ ಭದ್ರಕೋಟೆಯಾಗಿದ್ದು, ಇಲ್ಲಿ ನಿಖಿಲ್​ ಗೆಲುವಿಗೆ ಏನೂ ಸಮಸ್ಯೆ ಇಲ್ಲ ಎನ್ನುವುದು ಒಂದು ಕಡೆಯಾದರೆ, ಗೆಲುವು ದೊರೆಯಲಿದೆ ಎನ್ನುವ ನಿಖಿಲ್​ ಮಾತು ಹಾಗೂ ಏನನ್ನೂ ಹೇಳಲಾಗದು ಎನ್ನುವ ಯೋಗೇಶ್ವರ್​ ಅನಿಸಿಕೆ ಇಲ್ಲಿ ವರ್ಕ್​ಔಟ್​ ಆಗುತ್ತಿದೆ.

ಲೆಕ್ಕಕ್ಕೆ ಸಿಗುತ್ತಿಲ್ಲ

ಬಾರಿ ಹೈ ವೋಲ್ಟೇಜ್​ ಕ್ಷೇತ್ರವಾಗಿದ್ದ ಚನ್ನಪಟ್ಟಣದಲ್ಲಿ ಆರಂಭದ ದಿನಗಳಲ್ಲಿ ಫಲಿತಾಂಶ ಒಂದೇ ಕಡೆಗೆ ವಾಲಿತ್ತು. ಯೋಗೇಶ್ವರ್​ ಗೆಲುವು ನಿಶ್ಚಿತ ಎನ್ನುವ ಮಾತುಗಳು ಇದ್ದವು. ಆದರೆ ನಿಖಿಲ್​ ಸ್ಪರ್ಧೆಯಿಂದಾಗಿ ಇಲ್ಲಿನ ಚಿತ್ರಣವೇ ಬದಲಾಯಿತು. ಸೋಲು ಗೆಲುವಿನ ಲೆಕ್ಕಾಚಾರ 5-7 ಸಾವಿರ ಮತಗಳ ನಡುವೆಯೇ ಓಡಾಟ ನಡೆಸುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಯೋಗೇಶ್ವರ್​ ಪರವಾಗಿ ಇದ್ದ ಬೆಟ್ಟಿಂಗ್​, ಯೋಗೇಶ್ವರ್​ ಸುದ್ದಿಗೋಷ್ಠಿ ನಂತರ ನಿಖಿಲ್​ ಪರವಾಗಿ ವಾಲಿದೆ. ಅತ್ತ ಕಾಂಗ್ರೆಸಿಗರೂ ಬೆಟ್ಟಿಂಗ್​ ಕಟ್ಟಲು ಮುಂದಾಗುತ್ತಿದ್ದರೂ ಏನಾಗುವುದೋ ಎನ್ನುವ ಆತಂಕ ಕೊಂಚ ಹಿಂಜರಿಕೆಯನ್ನು ತಂದಿದೆ.

ಬೂತ್​ ಮಟ್ಟಕ್ಕೂ ಬೆಟ್ಟಿಂಗ್​

ಉಪ ಚುನಾವಣೆ ಕದನದ ಕಾವು ತಾರಕಕ್ಕೆ ಏರಿತ್ತು. ಪ್ರತಿ ಬೂತ್​ ಮಟ್ಟದಲ್ಲಿಯೂ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು. ಈಗ ಇದೇ ಕೆಲಸದ ಆದಾರದ ಮೇಲೆ ಬೂತ್​ ಮಟ್ಟದಲ್ಲೂ ಬೆಟ್ಟಿಂಗ್​ ಆರಂಭಗೊಂಡಿದೆ. ಯಾವ ಬೂತ್​ನಲ್ಲಿ ಯಾರು ಎಷ್ಟು ಮತಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಲಕ್ಷಾಂತರ ರೂಪಾಯಿ ಬೆಟ್ಟಿಂಗ್​ ಕಟ್ಟಲು ಸಿದ್ದತೆ ಮಾಡಿಕೊಂಡಿದ್ದಾರೆ. ನಂತರ ನಿಖಿಲ್​ ಹಾಗೂ ಯೋಗೇಶ್ವರ್​ ಪಡೆಯುವ ಮತಗಳ ಮೇಲೂ ಬೆಟ್ಟಿಂಗ್​ ಕಟ್ಟಲು ಕರೆಯಲಾಗುತ್ತಿದೆ.

====