ಸಂದೀಪ್ ಸಾಲ್ಯಾನ್ ಬಂಟ್ವಾಳ
ತರಕಾರಿ ತ್ಯಾಜ್ಯ, ಹಸಿಕಸಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಬಂಟ್ವಾಳ ಪುರಸಭೆಯ ಪ್ರಾಯೋಗಿಕ ಪ್ರಯತ್ನ ಯಶಸ್ಸು ಕಂಡಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಗೊಬ್ಬರ ಘಟಕ ಆರಂಭಿಸಿದ್ದು, ಈಗ ಸಾವಯವ ಗೊಬ್ಬರ ಬಳಕೆಗೆ ಸಿದ್ಧಗೊಂಡಿದೆ.
ಬಂಟ್ವಾಳ ಪುರಸಭೆಯ ಕಸದ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಹಾಗೂ ಮಂಗಳೂರಿಗೆ ಸಾಗಾಟವಾಗುವ ಇಲ್ಲಿನ ಕಸದ ಹೊರೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸುವ ಪ್ರಯತ್ನ ಕಳೆದ ಒಂದೂವರೆ ತಿಂಗಳ ಹಿಂದೆ ಆರಂಭಗೊಂಡಿತ್ತು. ಪರಿಸರ ಇಂಜಿನಿಯರ್ ಯಾಸ್ಮೀನ್ ಹಾಗೂ ಕಿರಿಯ ಇಂಜಿನಿಯರ್ ಅವರ ಸಹಾಯಕ ಇಕ್ಬಾಲ್ ನೇತೃತ್ವದಲ್ಲಿ ಪೌರಕಾರ್ಮಿಕರು ಪುರಸಭಾ ಕಾರ್ಯಲಯದ ಹಿಂಭಾಗದಲ್ಲಿಯೇ ಸಾವಯವ ಗೊಬ್ಬರ ತಯಾರಿಕೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದರು. ಪುರಸಭಾ ವ್ಯಾಪ್ತಿಯ ಅಂಗಡಿಗಳಲ್ಲಿ ಸಿಗುತ್ತಿದ್ದ ತರಕಾರಿ, ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಗೊಬ್ಬರ ತಯಾರಿಯನ್ನು ಶುರು ಮಾಡಿದ್ದರು. ಈಗಾಗಲೇ ಮೂರು ಪ್ರತ್ಯೇಕ ಘಟಕಗಳನ್ನು ಮಾಡಿಕೊಂಡು ಗೊಬ್ಬರ ತಯಾರಿ ನಡೆಯುತ್ತಿದೆ. ಈ ಪೈಕಿ ಆರಂಭದ ಘಟಕದಲ್ಲಿ ಸಾವಯವ ಗೊಬ್ಬರ ಸಿದ್ದಗೊಂಡಿದ್ದು ಪುರಸಭೆಯ ಸಾಮೂಹಿಕ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.
ಶಾಸಕರಿಂದ ಮೆಚ್ಚುಗೆ
ಪುರಸಭೆಯ ಈ ಪ್ರಯತ್ನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಈ ಹಿಂದೆ ಕಸದ ಸಮಸ್ಯೆ ವ್ಯಾಪಕವಾಗಿದ್ದು ಅದನ್ನು ನಿಭಾಯಿಸುವುದೇ ದೊಡ್ಡ ಸವಲಾಗಿತ್ತು. ಈಗ ಪುರಸಭಾ ವ್ಯಾಪ್ತಿಯಲ್ಲಿ ಸಿಗುವ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಪ್ರಯೋಗ ಉತ್ತಮವಾಗಿದ್ದು ಇದ್ದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಶಾಸಕ ರಾಜೇಶ್ ನಾಕ್ ವಿಜಯವಾಣಿಗೆ ತಿಳಿಸಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಹಸಿಕಸದ ಗೊಬ್ಬರ ತಯಾರಿ ಬಗ್ಗೆ ಪುರಸಭೆ ಮುಖ್ಯಾಧಿಕಾರಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅನೇಕರು ಗೊಬ್ಬರ ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಎರೆಹುಳ ಗೊಬ್ಬರ ಘಟಕ ಆರಂಭ
ಸಾವಯವ ಗೊಬ್ಬರ ತಯಾರಿ ಪ್ರಯೋಗ ಯಶಸ್ಸು ಕಾಣುತ್ತಿರುವಂತೆಯೇ ಅದರ ಪಕ್ಕದಲ್ಲೇ ಎರೆಹುಳ ಗೊಬ್ಬರ ತಯಾರಿ ಘಟಕವನ್ನು ಆರಂಭಿಸಲಾಗಿದೆ. ಅದಕ್ಕೆ ಬೇಕಾದ 9 ಅಡಿ ಉದ್ದ 3.5 ಅಡಿ ಅಗಲದ ಕೃತಕ ತೊಟ್ಟಿಯನ್ನು ರಚಿಸಿ ಹಸಿಕಸ, ಹುಲ್ಲು, ತರಗೆಲೆ, ಸೆಗಣಿಯನ್ನು ತುಂಬಿಡಲಾಗಿದ್ದು ಕೆಲ ದಿನಗಳ ಬಳಿಕ ಎರೆಹುಳಗಳನ್ನು ಹಾಕಲಾಗುವುದು.
ಮನೆಗಳಲ್ಲಿ ಆರಂಭಿಸಲು ಪ್ರೇರಣೆ ಹಸಿ ಕಸದ ಗೊಬ್ಬರ ತೊಟ್ಟಿಗಳನ್ನು ಪುರಸಭಾ ವ್ಯಾಪ್ತಿಯ ನಾಗರಿಕರು ತಮ್ಮ ಮನೆ ವ್ಯಾಪ್ತಿಯಲ್ಲಿ ಸ್ಥಳವಕಾಶವಿದ್ದರೆ ಅಲ್ಲಿಯೇ ಆರಂಭಿಸಬಹುದು, ಇದರಿಂದ ಕಸ ವಿಲೇವಾರಿಯೂ ಸುಲಭವಾಗಿ ತ್ಯಾಜ್ಯದ ಸಮಸ್ಯೆ ಬಗೆಹರಿಯುತ್ತದೆ. ವಸತಿ ಸಂಕೀರ್ಣಗಳಲ್ಲಿ ಹಾಗೂ ಜಾಗದ ಕೊರತೆ ಇರುವ ಜನರು ಹಸಿ ಕಸವನ್ನು ಪ್ರತ್ಯೇಕವಾಗಿ ನೀಡಿದಲ್ಲಿ ಪುರಸಭೆಯೇ ಗೊಬ್ಬರ ತಯಾರಿ ಮಾಡುವುದಾಗಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ತಿಳಿಸಿದ್ದಾರೆ.
ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಪುರಸಭೆಯ ಪ್ರಯತ್ನ ಮೆಚ್ಚುವಂಥದ್ದು. ಇದರಿಂದ ಕಸದ ವಿಲೇವಾರಿಯ ಸಮಸ್ಯೆ ಬಗೆಹರಿಯುವುದರ ಜತೆಗೆ ಮಂಗಳೂರಿಗೆ ಸಾಗಿಸುವ ಹೊರೆಯೂ ಕಡಿಮೆಯಾಗಲಿದೆ. ಗೊಬ್ಬರ ತಯಾರಿಗೆ ಸ್ಥಳವಕಾಶ ಕಡಿಮೆಯಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಬಂಟ್ವಾಳ ಶಾಸಕ ಹಸಿಕಸವನ್ನು ಸಾವಯವ ಗೊಬ್ಬರ ಮಾಡುವ ಪ್ರಾಯೋಗಿಕ ಪ್ರಯತ್ನ ಸಫಲವಾಗಿದ್ದು ಗೊಬ್ಬರ ಸಿದ್ದಗೊಂಡಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೊಬ್ಬರ ತಯಾರಿಸುವ ಚಿಂತನೆ ಇದೆ. ಈ ಮೂಲಕ ಕಸದ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನ ನಡೆಯುತ್ತಿದ್ದು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಲೀನಾ ಬ್ರಿಟ್ಟೊ, ಮುಖ್ಯಾಧಿಕಾರಿ, ಪುರಸಭೆ ಬಂಟ್ವಾಳ