ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರ ವಿತರಣೆಯ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂಬ ಕಂಪನಿಯ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ. ಅಲ್ಲದೆ, ಯಾವುದೇ ಕಾರಣ ನೀಡದೇ ವಿಮಾ ಪರಿಹಾರ ವಿತರಿಸುವಂತೆ ಕೇಂದ್ರ ಆದೇಶಿಸಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2023 24 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆಯು ರೈತರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಮಾ ಪರಿಹಾರ ನೀಡದಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಪರಿಣಾಮ ಕ್ಷೇಮ ಜನರಲ್ ಇನ್ಸೂರೆನ್ಸ್ ಕಂಪನಿಗೆ ಒಂದು ವಾರದಲ್ಲಿ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಕೇಂದ್ರ ಸರ್ಕಾರ ಮಾರ್ಚ್ 6 ರಂದು ಆದೇಶ ನೀಡಿತ್ತು.
ಆದರೆ,ಆದೇಶವನ್ನು ಪುನಃ ಪರಿಶೀಲನೆ ಮಾಡಲು ಕ್ಷೇಮ ಇನ್ಸೂರೆನ್ಸ್ ಕಂಪನಿಯು ಮನವಿ ಮಾಡಿತ್ತು. ಪರಾಮರ್ಶಿಸಿದ ಕೇಂದ್ರವು ಕ್ಷೆಮಾ ಕಂಪನಿಯವರ ಬೇಡಿಕೆಯನ್ನು ತಿರಸ್ಕರಿಸಿರುತ್ತದೆ.
ವಿಮಾ ಪರಿಹಾರ ನೀಡಲು ಇನ್ಶುರೆನ್ಸ್ ಕಂಪನಿ ಕರಾರಿನಂತೆ ಬಾದ್ಯಸ್ಥರಿದ್ದು ಈ ಮೊದಲಿನ ಅಂಕಿ ಅಂಶಗಳ ಬಗ್ಗೆ ಯಾವುದೇ ತಕರಾರು ಸಲ್ಲಿಸದೆ ಈಗ ವಿಮಾ ಪರಿಹಾರವನ್ನು ತಿರಸ್ಕರಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ, ಮುಖ್ಯ ಹವಾಮಾನ ಮಾಪನ ಕೇಂದ್ರಗಳ ವರದಿ ಅಲಭ್ಯವಿದ್ದಲ್ಲಿ ದೃಢೀಕರಣ ಹವಾಮಾನ ಮಾಪನ ಕೇಂದ್ರಗಳ ದಾಖಲೆಯನ್ನು ಆಧರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರದ ಟೆಂಡರ್ ನೋಟಿಫಿಕೇಶನ್ ನಲ್ಲಿ ತಿಳಿಸಲಾಗುತ್ತು.
ಕೇಂದ್ರ ಸರ್ಕಾರ ಈ ಕುರಿತು ಈಗಾಗಲೇ ಮಾರ್ಚ್ 6 ರಂದು ವಿಮಾ ಪರಿಹಾರವನ್ನು ತಕ್ಷಣ ನೀಡಲು ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದ್ದನ್ನು ಉಲ್ಲೇಕಿಸಿ ಪುನಃ ಆದೇಶ ಮಾಡಿದೆ. ಏಳು ದಿನಗಳಲ್ಲಿ ಪರಿಹಾರ ನೀಡುವಲ್ಲೊ ತಪ್ಪಿದಲ್ಲಿ ವಿಮಾ ಕಂಪನಿ ಮೇಲೆ ಆಡಳಿತಾತ್ಮಕ ಕ್ರಮ ಮತ್ತು ಹಣಕಾಸು ದಂಡವನ್ನು ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ ಎಂದು ಕಾಗೇರಿ ತಿಳಿಸಿದ್ದಾರೆ.