ಹುಬ್ಬಳ್ಳಿ: ಭಾರತದ ಅಧ್ಯಾತ್ಮವನ್ನು ಅಪ್ಪಿದವರು ನಾವು. ಆದರೆ, ಒಪ್ಪಿದವರು ಪಾಶ್ಚಿಮಾತ್ಯರು. ನಮಗೆ ಅಧ್ಯಾತ್ಮದ ದಿವ್ಯ ಜ್ಞಾನವಿದೆ. ಅದನ್ನು ವಿಜ್ಞಾನದೊಂದಿಗೆ ತುಲನೆ ಮಾಡಿ ಪಾಶ್ಚಿಮಾತ್ಯರು ಒಪ್ಪಿದ್ದಾರೆ. ಅವರೇ ಸನಾತನ ಧರ್ಮದ ಬೆಂಬಲಿಗರು ಎಂದು ಗದಗಿನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಿರಾಮಯ ಫೌಂಡೇಷನ್ ವತಿಯಿಂದ ಇಲ್ಲಿನ ಅಶೋಕ ನಗರದ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ವಿವೇಕ ಭಾರತ’ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಗಳ ಸ್ಮರಣೆಯಲ್ಲಿ ಯುವ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತವನ್ನು ಅಮೂಲಾಗ್ರವಾಗಿ ಅರಿಯಬೇಕೆಂದರೆ ವಿವೇಕಾನಂದರನ್ನು ಅಧ್ಯಯನ ಮಾಡಬೇಕು. ವಿವೇಕಾನಂದರ ಚಿಂತನೆಗಳೇ ನಮಗೆ ಭವ್ಯ ಮಾರ್ಗ. 20 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸನಾತನ ಧರ್ಮವನ್ನು ನಾವು ಪಾಲಿಸುತ್ತಿದ್ದೇವೆ. ನಮ್ಮ ಋಷಿ-ಮುನಿಗಳ ಸತ್ಯಾನ್ವೇಷಣೆ ವಿಜ್ಞಾನದೊಂದಿಗೂ ಸಮ್ಮಿಳಿತಗೊಂಡಿದೆ. ಈ ದೇಶದ ಚಿಂತನೆಗಳನ್ನು ಪಾಶ್ಚಾತ್ಯರು ಹಾಡಿ ಹೊಗಳಿದ್ದಾರೆ. ನಮ್ಮವರು ಹೀಗಳೆಯುತ್ತಿದ್ದಾರೆ. ಎಂಥಾ ವೈರುಧ್ಯವಿದೆ ನೋಡಿ ಎಂದರು.
ಕೆಲವರು ಕೆಲವೊಂದನ್ನು ಪುಕ್ಕಟೆ ಕೊಟ್ಟರೆ ಒಸಮಾಬಿನ್ ಲಾಡೆನ್ಗೂ ಮತ ಹಾಕುತ್ತಿದ್ದಾರೆ. ಇದು ಖಂಡಿತ ಸಲ್ಲದು. ಆತ್ಮಗೌರವ, ಪ್ರಜ್ಞೆ ಇಟ್ಟುಕೊಂಡು ಜೀವಿಸಬೇಕು. ಭಿಕ್ಷೆ ಬೇಡಬಾರದು. ಜೀವನ ಧರ್ಮವನ್ನು ಕಲಿಯಬೇಕು ಎಂದು ಮಾರ್ವಿುಕವಾಗಿ ನುಡಿದರು.
ಧಾರವಾಡ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಧರ್ಮ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು. ಭವ್ಯ ಭಾರತದ ನಿರ್ವಣಕ್ಕೆ ಎರಡೂ ಸರಿಸಮ ಮಾರ್ಗ ತೋರಬಲ್ಲವು. ನಾವು ಎಂಥದ್ದೇ ಶಿಕ್ಷಣ ಕಲಿತರೂ ಧರ್ಮಕ್ಕೆ ಪೂರಕವಾಗಿರಬೇಕು ಎಂದರು.
ಚಿಂತಕ ಬಿ.ವಿ. ವಸಂತಕುಮಾರ ಮಾತನಾಡಿ, ಭಾರತಕ್ಕೆ ತನ್ನದೇ ಆದ ಶಕ್ತಿ-ಸಾಮರ್ಥ್ಯವಿದೆ. ಅದನ್ನು ವಿಶ್ವಕ್ಕೆ ತೋರಿದವರು ಸ್ವಾಮಿ ವಿವೇಕಾನಂದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ, ವಿವೇಕ ಭಾರತ ನಿರ್ಮಾಣ ಸುಲಭ ಸಾಧ್ಯ. ಅವಿವೇಕ ಭಾರತ ಸೋತು, ವಿವೇಕ ಭಾರತ ಗೆಲ್ಲಲಿದೆ ಎಂದರು.
ಚಿಂತಕರಾದ ಜ್ಯೋತಿ ಬಾದಾಮಿ, ರಘುನಂದ ಜಿ., ಅರುಣಕುಮಾರ ಜಿ., ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಇತರರು ಇದ್ದರು.