ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಮೇ ತಿಂಗಳ ದಲಿತ ಕುಂದು ಕೊರತೆ ಸಭೆ
ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಸೌಲಭ್ಯಗಳಿದ್ದರೂ ರೋಗಿಗಳನ್ನು ದಾಖಲಾತಿ ಮಾಡಿಸಿಕೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುವುದರಿಂದ ಬಡ ರೋಗಿಗಳು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಗಂಭೀರ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಮೇ ತಿಂಗಳ ದಲಿತ ಕುಂದು ಕೊರತೆ ಸಭೆಯಲ್ಲಿ ಈ ವಿಚಾರ ಚರ್ಚೆಯಾಯಿತು.
ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಪೊಲೀಸ್ ಇಲಾಖೆಗೂ ದೂರುಗಳು ಬರುತ್ತಿವೆ. ಸಮಸ್ಯೆ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಠಾಣೆಗೆ ಮನವಿ ಕೊಡಿ. ಜಿಲ್ಲಾಧಿಕಾರಿಯವರಿಗೂ ಮನವಿ ಕೊಡಿ. ಸಭೆಯಲ್ಲಿ ನಡೆದ ಚರ್ಚೆಯ ವಿಚಾರವನ್ನು ಜಿಲ್ಲಾಧಿಕಾರಿಯವರಿಗೆ ತಿಳಿಸಲಾಗುವುದು ಎಂದು ಡಿಸಿಪಿ ಮಿಥುನ್ ಎಚ್.ಎನ್. ಪ್ರತಿಕ್ರಿಯಿಸಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಮುಖಂಡ ಎಸ್.ಪಿ. ಆನಂದ್, ಮೂಡುಬಿದಿರೆಯ ಕ್ಯಾನ್ಸರ್ ರೋಗಿಯೊಬ್ಬರನ್ನು ದಾಖಲಿಸುವಲ್ಲಿ ವಿಳಂಬ ಮಾಡಿದ್ದಾರೆ. ಬೆಡ್ ಇಲ್ಲ ಎನ್ನುವ ಕಾರಣ ನೀಡಿ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಪಡಿತರ ಚೀಟಿ ಇಲ್ಲದ ಕಾರಣ, ಬಿಪಿಎಲ್ ಕಾರ್ಡ್ ಮಾಡಿಸಿ ಬರುವಂತೆ ಸೂಚಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಸೂಚಿಸಿದರೂ ಪ್ರಯೋಜನವಾಗಿಲ್ಲ. ಗಂಭೀರ ರೋಗಗಳಿದ್ದರೆ ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ, ಅಡ್ಮಿಟ್ ಮಾಡಬಹುದು ಎಂದು ಸರ್ಕಾರದ ಉಲ್ಲೇಖವಿದ್ದರೂ ಆಸ್ಪತ್ರೆ ಸಿಬಂದಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಮಗುವೊಂದು ಮಕ್ಕಳ ವಿಭಾಗದಲ್ಲಿ ಐಸಿಯು ಇಲ್ಲದ ಕಾರಣ ಸಾವನ್ನಪ್ಪಿದೆ. ಹೃದಯ ಕಾಯಿಲೆ ಇದ್ದ ವ್ಯಕ್ತಿಯೊಬ್ಬರಿಗೂ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಿಸಬೇಕು
ಶಾಲೆ- ಪಪೂ ಕಾಲೇಜುಗಳು ಇನ್ನೇನು ಆರಂಭವಾಗಲಿದ್ದು, ದೂರದ ಪ್ರದೇಶಗಳಿಂದ ಬಂದು ಶಿಕ್ಷಣ ಪಡೆಯುವವರು ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಹಾಸ್ಟೆಲ್ ಗಳನ್ನು ಅವಲಂಬಿಸುತ್ತಾರೆ. ಆದರೆ ನಮ್ಮಲ್ಲಿ ಹಾಸ್ಟೆಲ್ ಗಳಿಗೆ ಭಾರಿ ಬೇಡಿಕೆ ಇದೆ. ವಿದ್ಯಾರ್ಥಿಗಳು ಹಾಸ್ಟೆಲ್ ದೊರೆಯದೆ ಶಿಕ್ಷಣವನ್ನೇ ಮೊಟಕುಗೊಳಿಸುವ ಸಾಧ್ಯತೆಯೂ ಇದೆ. ಹಾಗಾಗಿ ಹಾಸ್ಟೆಲ್ ಗಳ ಸಂಖ್ಯೆ ಹೆಚ್ಚಿಸಬೇಕು. ಹಾಸ್ಟೆಲ್ ಸಮಿತಿಗಳಿಗೆ ಶಾಸಕರು ಅಧ್ಯಕ್ಷರಾಗಿದ್ದು, ಅವರಿಗೆ ಬೇಕಾದವರಿಗೆ ಮಾತ್ರ ಕೊಡಿಸುತ್ತಾರೆ ಎಂದು ಮುಖಂಡರು ಆರೋಪಿಸಿದರು.
ಜಗದೀಶ್ ಪಾಂಡೇಶ್ವರ ಅವರು ಮಾತನಾಡಿ, ಇತ್ತೀಚೆಗೆ ಹೊಯ್ಗೆ ಬಜಾರ್ ನಲ್ಲಿ ಸ್ಥಳಿಯ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ, ಆಟೋ ಚಾಲಕನೊಬ್ಬ ಬಂದು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದು, ರಾಡ್ ನಿಂದ ಹಲ್ಲೆಗೂ ಯತ್ನಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿದೆ. ಈ ಭಾಗದಲ್ಲಿ ಇಂತಹ ಘಟನೆ ಗಳು ಆಗಾಗ್ಗೆ ನಡೆಯುತ್ತಿದ್ದು, ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಡಿಸಿಪಿ ಮಿಥುನ್ ಉತ್ತರಿಸಿ, ರಾತ್ರಿ 8-11 ಗಂಟೆ ವರೆಗಿನ ಬೀಟ್ ಹೆಚ್ಚಿಸಬೇಕು. ಟಾಪ್ ಲೈಟ್, ಸೈರನ್ ಹಾಕಿ ಸ್ಥಳದಲ್ಲಿ ರೌಂಡ್ಸ್ ಮಾಡುವುದರಿಂದ ಭಯ ಉಂಟಾಗುತ್ತದೆ. ಡಾರ್ಕ್ ಸ್ಪಾಟ್ ಗಳಿದ್ದಲ್ಲಿ ಸಿಸಿ ಕೆಮರಾ ಅಳವಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಪಾಂಡೇಶ್ವರ ಠಾಣಾಧಿಕಾರಿಗೆ ಸೂಚಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಲ್ಲಿನ ಕ್ವಾರೆ ಲೈಸೆನ್ಸ್ ಮೇಲ್ವರ್ಗದವರಿಗೆ ಮಾತ್ರ ದೊರೆಯುತ್ತಿದ್ದು, ದಲಿತ ಸಮುದಾಯದವರಿಗೆ ಇನ್ನೂ ಕೊಟ್ಟಿಲ್ಲ ಎಂದು ಜಗದೀಶ್ ಪಾಂಡೇಶ್ವರ ಹೇಳಿದರು. ಡಿಸಿಪಿ ಉತ್ತರಿಸಿ, ಈ ಬಗ್ಗೆ ಡಿಸಿಆರ್ ಇ ಗೆ ಮನವಿ ಕೊಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಸಿ ಆರ್ ಇ ಪೊಲೀಸ್ ಅಧೀಕ್ಷಕ ಸೈಮನ್, ಎಸಿಪಿ ವಿಜಯ ಕ್ರಾಂತಿ, ವಿವಿಧ ಠಾಣೆಗಳ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.