ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದುವಿನಲ್ಲಿ 42 ವರ್ಷಗಳ ಹಿಂದೆ ಐನೆಕಿದು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿರುವ ಮಾವಿನ ಮರದ ಕೆಳಗೆ ಅಂಗನವಾಡಿ ಆರಂಭವಾಗಿತ್ತು. ಆ ಕಾಲದಿಂದ ಇಂದಿನ ತನಕ ಗ್ರಾಮೀಣ ಭಾಗದ ಪುಟಾಣಿ ವಿದ್ಯಾರ್ಥಿಗಳಿಗೆ ಆರಂಭಿಕ ಜ್ಞಾನ ನೀಡುತ್ತಾ ಬಂದ ವಿದ್ಯಾದೇಗುಲಕ್ಕೆ ಇದೀಗ ನಾಲ್ಕು ದಶಕಗಳ ಬಳಿಕ ಎಂಆರ್‌ಪಿಎಲ್‌ನಿಂದ ಕಟ್ಟಡ ರಚನೆಯಾಗಿದೆ.
ಈ ಕಟ್ಟಡ ರಚನೆಗೆ ಮಾಜಿ ಶಾಸಕ ಕೂಜುಗೋಡು ಸುಬ್ರಹ್ಮಣ್ಯ ಗೌಡ ಅವರ ಪುತ್ರ ಶಿವಕುಮಾರ್ ಕೂಜುಗೋಡು ಜಾಗ ಕೊಟ್ಟು, ಅನುದಾನವನ್ನೂ ತರಿಸಿಕೊಟ್ಟು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
1984ರಲ್ಲಿ ಮರದಡಿ ಆರಂಭ: 1984ರಲ್ಲಿ ಐನೆಕಿದು ಹಿ.ಪ್ರಾ. ಶಾಲಾ ಮೈದಾನದ ಮಾವಿನ ಮರದಡಿ ಬೆಂಚು ಇಟ್ಟು ಅಂಗನವಾಡಿ ಆರಂಭಿಸಲಾಗಿತ್ತು. ಕೆಲ ತಿಂಗಳ ಬಳಿಕ ಅದನ್ನು ಐನೆಕಿದು ಶಾಲೆಯಲ್ಲಿ ತೆರೆಯಲಾಯಿತು. ಆಗ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಗಿರಿಯಪ್ಪ ಗೌಡ ಕೂಜುಗೋಡು ಕಟ್ಟೆಮನೆ ಶಾಲೆಯಲ್ಲಿ ಅಂಗನವಾಡಿ ನಡೆಸಲು ವ್ಯವಸ್ಥೆ ಮಾಡಿಕೊಟ್ಟರು. ಅಲ್ಲಿ ಕೆಲ ತಿಂಗಳು ಶಾಲೆ ನಡೆದು ಅಲ್ಲೇ ಹತ್ತಿರ ಇದ್ದ ಯುವಕ ಮಂಡಲದ ಕಟ್ಟಡದಲ್ಲಿ 9 ವರ್ಷಗಳ ಕಾಲ ಅಂಗನವಾಡಿ ಮುಂದುವರಿಯಿತು. 1994ರಲ್ಲಿ ಸ್ವಂತ ಜಾಗದಲ್ಲಿ ಹೊಸ ಕಟ್ಟಡ ರಚನೆಯಾಯಿತು.
ಮಾದರಿಯಾದ ಶಿವಕುಮಾರ್:
1994ರಲ್ಲಿ ರಚಿತವಾದ ಅಂಗನವಾಡಿ ಕಟ್ಟಡ ಇತ್ತೀಚೆಗೆ ಶಿಥಿಲವಾಗಿತ್ತು. ಅಂಗನವಾಡಿಗೆ ಸ್ವಂತ ಜಾಗ ಇದ್ದರೂ ಅಲ್ಲಿಯೇ ಅಂಗನವಾಡಿ ಕಟ್ಟಡ ರಚಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಅನುದಾನದ ಅವಶ್ಯಕತೆಯೂ ಇತ್ತು. ಇದನ್ನು ಮನಗಂಡ ಶಿವಕುಮಾರ್ ಕೂಜುಗೋಡು 10 ಸೆಂಟ್ಸ್ ಜಾಗ ಅಂಗನವಾಡಿಗೆ ಬಿಟ್ಟು ಕೊಟ್ಟರು. ಅಲ್ಲದೆ ಎಂಆರ್‌ಪಿಎಲ್ ಅವರನ್ನು ಸಂಪರ್ಕಿಸಿ ಅನುದಾನ ತರಿಸುವ ವ್ಯವಸ್ಥೆ ಮಾಡಿದರು. ಕಟ್ಟಡ ರಚನೆಗೆ ಬೇಕಾದ ನೀರಾವರಿ ಮತ್ತಿತರ ವ್ಯವಸ್ಥೆ ಒದಗಿಸಿ ಸುಸಜ್ಜಿತ ಕಟ್ಟಡ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಕನಸಿನಂತೆ ಸಕಲ ವ್ಯವಸ್ಥೆ ಹೊಂದಿರುವ ಅಂಗನವಾಡಿ ಕಟ್ಟಡ ಎಂಆರ್‌ಪಿಎಲ್‌ನ ಸಿಎಸ್‌ಆರ್ ಂಡ್‌ನಿಂದ ನಿರ್ಮಾಣವಾಗಿದೆ.
ವ್ಯಾಸಂಗಕ್ಕೆ ಬೇಕಾದ ಸೂಕ್ತ ವ್ಯವಸ್ಥೆ
22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತವಾದ ಅಂಗನವಾಡಿ ಕಟ್ಟಡ ಮಕ್ಕಳ ವಿದ್ಯಾರ್ಜನೆಗೆ ತೆರೆದುಕೊಂಡಿದೆ. ಹೊಸ ಕಟ್ಟಡವು ಹೊರ ಆವರಣ, ತರಗತಿ ನಡೆಯುವ ಜಾಗ, ಸ್ಟಾಕ್ ರೂಂ, ಅಡುಗೆ ಕೊಠಡಿ, ಶೌಚಗೃಹದ ವ್ಯವಸ್ಥೆ ಹೊಂದಿದೆ. ಹೊರಗಡೆ ಕಾಂಪೌಂಡ್ ಇದೆ. ಮಕ್ಕಳಿಗೆ ಪ್ಲೇ ಏರಿಯಾವೂ ಇದೆ.
ಗ್ರಾಮೀಣ ಭಾಗದಲ್ಲಿ ಪುಟಾಣಿಗಳ ವ್ಯಾಸಂಗಕ್ಕೆ ಅನುಕೂಲಕರವಾದ ಅಂಗನವಾಡಿಗೆ ಕಟ್ಟಡ ರಚನೆಯಾಗಬೇಕು ಎಂಬ ಕನಸಿತ್ತು. ಅದಕ್ಕಾಗಿ ಅಂಗನವಾಡಿ ಕಟ್ಟಡ ರಚನೆಗೆ ಸ್ಥಳ ನೀಡಿ ಅಲ್ಲಿ ಎಂಆರ್‌ಪಿಎಲ್ ಅನುದಾನದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲು ಶ್ರಮವಹಿಸಿ ಸಲವಾದ ಸಂತಸ ಇದೆ. ಇದೀಗ ಸರ್ವ ವ್ಯವಸ್ಥೆ ಇರುವ ಕಟ್ಟಡ ರಚನೆಯಾಗಿ ಮಕ್ಕಳು ಅಂಗನವಾಡಿಯಲ್ಲಿ ಸಂತಸದಿಂದ ಕಲಿಯುತ್ತಿರುವುದು ಕಂಡಾಗ ಶ್ರಮ ಸಾರ್ಥಕವಾಯಿತು ಎಂದೆನಿಸುತ್ತಿದೆ. ಎಂಆರ್‌ಪಿಎಲ್, ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು. ಶಿವಕುಮಾರ್ ಕೂಜುಗೋಡು ಕಟ್ಟಡ ರಚನೆಗೆ ಶ್ರಮಿಸಿದವರು https://www.vijayavani.net/cctv-camera-equipment-stolen-from-house https://www.vijayavani.net/farewell-ceremony-13