ಘಟಪ್ರಭಾ: ಬಾವಿಯಲ್ಲಿ ಮುಳುಗಿ ತಂದೆ-ಮಗ ಮೃತಪಟ್ಟ ಘಟನೆ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಸತ್ತೆಪ್ಪ ಕಮತಿ (65), ಪರಶುರಾಮ ಕಮತಿ (14) ಮೃತಪಟ್ಟವರು. ತೋಟದ ಬಾವಿಯಲ್ಲಿ ಈಜು ಕಲಿಸಲು ಮಗನಿಗೆ ದಿಂಡಿ ಕಟ್ಟಿ ಬಾವಿಗೆ ಇಳಿಸಿದ್ದರು.
ಏಕಾಏಕಿ ದಿಂಡಿ ಹರಿದು ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಬಾವಿಗೆ ಸತ್ತೆಪ್ಪ ಅವರು ಹಾರಿದ್ದಾರೆ. ಆದರೆ, ಬಾವಿಗೆ ಜಿಗಿದ ತಂದೆಯನ್ನು ಗಾಬರಿಗೊಂಡ ಮಗ ಬಿಗಿಯಾಗಿ ತಬ್ಬಿ ಹಿಡಿದಿದ್ದರಿಂದ ಇಬ್ಬರೂ ನೀರು ಪಾಲಾಗಿದ್ದಾರೆ.
ಬಾವಿಯ ದಡದಲ್ಲಿ ಕುಳಿತ ಸತ್ತೆಪ್ಪನ ಹಿರಿಯ ಮಗ ಜನರನ್ನು ಕೂಗಿ ಕರೆಯುವಷ್ಟರಲ್ಲಿ ತಂದೆ-ಮಗ ಜೀವ ಕಳೆದುಕೊಂಡಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.