ಜಿಲ್ಲೆ

ಜಿಲ್ಲೆಗೆ ಕಲ್ಯಾಣ ಕರ್ನಾಟಕ ಸ್ಥಾನಮಾನಕ್ಕಾಗಿ ಹೋರಾಟ

ಚಿತ್ರದುರ್ಗ: ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ 371 (ಜೆ) ಮಾದರಿಯಲ್ಲೇ ಚಿತ್ರದುರ್ಗ ಜಿಲ್ಲೆ, ಜಗಳೂರು ತಾಲೂಕಿಗೆ ವಿಶೇಷ ಸ್ಥಾನಮಾನ ದೊರೆಯಬೇಕು. ಆ ನಿಟ್ಟಿನಲ್ಲಿ ಹೋರಾಟಕ್ಕಾಗಿ ಕಲ್ಯಾಣ ಕರ್ನಾಟಕ ಸಂಘಟನಾ ಸೇನೆ ಸ್ಥಾಪಿಸಲಾಗಿದೆ ಎಂದು ಸೇನೆಯ ಎ.ಎಂ.ಮರುಳಾರಾಧ್ಯ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ, ಕಾರ್ಮಿಕ ಸೇರಿ ಎಲ್ಲ ವರ್ಗದ ಜನರಿಗೂ ಒಳಿತಾಗಬೇಕು ಎಂಬ ಉದ್ದೇಶದೊಂದಿಗೆ ಧರ್ಮಾತೀತ, ಜಾತ್ಯಾತೀತ, ಪಕ್ಷಾತೀತವಾಗಿ 17 ಮಂದಿ ಸಮಾನ ಮನಸ್ಕರು ಸೇನೆಗೆ ಕೈಜೋಡಿಸಿದ್ದು, ಹೋರಾಟದ ರೂಪುರೇಷ ಸಿದ್ದಪಡಿಸಲಾಗುತ್ತಿದೆ ಎಂದರು.

ಜಿಲ್ಲಾ ಕೇಂದ್ರದಿಂದ ಹೋರಾಟ ಆರಂಭಿಸಿ, ಎಲ್ಲ ತಾಲೂಕು ಹಾಗೂ ಜಗಳೂರು ಭಾಗದಲ್ಲೂ ಸಂಘಟನೆ ಬಲಪಡಿಸಲು ಘಟಕ ಸ್ಥಾಪಿಸಿ ಪದಾಧಿಕಾರಿಗಳನ್ನು ನೇಮಿಸಲಾಗುವುದು. ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದರು.

ಒನಕೆ ಓಬವ್ವ ವೃತ್ತದಲ್ಲಿ ಜ.23ರಂದು ಸೇನೆಯ ಬಾವುಟ, ಲಾಂಛನ ಬಿಡುಗಡೆ ಆಗಲಿದೆ. ಇವೆರಡರಲ್ಲೂ ಮುರುಘಾ ಮಠದ ಶ್ರೀ ಮುರುಗಿ ಶಾಂತವೀರ ಸ್ವಾಮೀಜಿ ಅವರ ಭಾವಚಿತ್ರ ಇರಲಿದೆ. ಅಂದಿನ ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಾಹಿತಿ ಬಚ್ಚಬೋರನಹಟ್ಟಿ ಪಿ.ಬಸವರಾಜ, ಸಂಘಟನೆಯ ಅಜ್ಗರ್ ಬಾಷಾ, ಎಂ.ಗುರುಸ್ವಾಮಿ, ಎಂ.ದೇವರಾಜ, ಟಿ.ಎಲ್.ಮಂಜುನಾಥ, ಕೆ.ಎನ್.ಜಡೇಶ, ಎಸ್.ರಾಜಕುಮಾರ, ಎಲ್.ಬಸವರಾಜ್, ಆರ್.ಪ್ರಕಾಶ್, ಟಿ.ಜಯಪ್ರಕಾಶ್, ಕೆ.ಎಸ್.ವೇದಪ್ರಕಾಶ್, ವಿ.ತಿಪ್ಪೇಸ್ವಾಮಿ, ನೂರುಲ್ಲ, ಸೋಲೋಮಾನ್ ರಾಜು ಇತರರಿದ್ದರು.