Welcome with Mangalvadya 
ಜಿಲ್ಲೆ

ನನಸಾದ ರಾಮಮಂದಿರ ನಿರ್ಮಾಣ ಕನಸು

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ದೊಡ್ಡಬಳ್ಳಾಪುರದಿಂದ ಆಗಮಿಸಿದ್ದ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಪವಿತ್ರ ಮಂತ್ರಾಕ್ಷತೆಗೆ ನಗರ ಹಾಗೂ ತಾಲೂಕಿನಾದ್ಯಂತ ಅದ್ದೂರಿ ಸ್ವಾಗತಕೋರಲಾಯಿತು.
ನಗರದ ಬಸವನಹಳ್ಳಿಯ ಲಕ್ಷ್ಮೀವೆಂಕಟರಮಣ ದೇವಸ್ಥಾನ ಆವರಣದಲ್ಲಿ ಸಮಾವೇಶಗೊಂಡ ನೂರಾರು ಹಿಂದು ಮುಖಂಡರು ಹಾಗೂ ಕಾರ್ಯಕರ್ತರು ಪವಿತ್ರ ಮಂತ್ರಾಕ್ಷತೆಯನ್ನು ಪೂರ್ಣಕುಂಭ, ಮಂಗಳವಾದ್ಯದೊಂದಿಗೆ ಸ್ವಾಗತಿಸಿದರು. ಬಳಿಕ ವಿಶೇಷ ಪೂಜೆ ಸಲ್ಲಿಸಿ, ರೇಣುಕಾನಗರದ ಬಲಮುರಿ ಗಣಪತಿ ದೇವಸ್ಥಾನದವರೆಗೆ ಮೆರವಣಿಗೆ ನೆಡೆಸಿ, ಪವಿತ್ರ ಮಂತ್ರಾಕ್ಷತೆ ಹಸ್ತಾಂತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎನ್.ರಾಮ್ ಮಾತನಾಡಿ, ಆದರ್ಶ ಪುರುಷ ರಾಮನ ಮಂದಿರ ನಿರ್ಮಾಣದ ಕನಸು ಈಗ ನನಸಾಗುತ್ತಿದೆ. ಮಂದಿರದ ನಿರ್ಮಾಣ ಕಾಮಗಾರಿ ನಿರ್ವಿಘ್ನವಾಗಿ ನಡೆಯಬೇಕು. ಮೂರ್ತಿ ಪ್ರತಿಷ್ಠಾಪನೆಗೆ ದೇಶದ ಎಲ್ಲ ಭಾಗದ ಜನರೂ ಸಾಕ್ಷಿಯಾಗಬೇಕು ಎಂಬ ಉದ್ದೇಶದಿಂದ ಮಂತ್ರಾಕ್ಷತೆ ಮತ್ತು ಆಮಂತ್ರಣಕ್ಕೆ ಜ.1ರವರೆಗೂ ಬಲಮುರಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಜತೆಗೆ ಮಂತ್ರಾಕ್ಷತೆ, ಆಮಂತ್ರಣಪತ್ರ ಸೇರಿದಂತೆ ಶ್ರೀರಾಮನ ಭಾವಚಿತ್ರವನ್ನು ಜ.1ರಿಂದ ಜ.12ರವರೆಗೂ ನಗರ, ತಾಲೂಕಿನ ಪ್ರತಿಯೊಂದು ಮನೆಗೂ ತಲುಪಿಸಲಾಗುವುದು ಎಂದರು.
ಕನ್ನಡ ಸಾಂಸ್ಕೃತಿಕ ರಂಗ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ, ಶತಮಾನಗಳ ಕಾಲ ಇಡೀ ದೇಶಕಾದು ಕುಳಿತಿದ್ದ ಮಹತ್ವದ ಕ್ಷಣ ಸನ್ನಿಹಿತವಾಗುವ ಕಾಲ ಬಂದಿದ್ದು, ಶೀಘ್ರದಲ್ಲಿ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ.
ಅಯೋಧ್ಯೆ ದೇಶದ ಪ್ರಮುಖ ಶ್ರದ್ಧಾ ಕೇಂದ್ರ. ಮರ್ಯಾದಾ ಪುರುಷೋತ್ತಮನ ನೆಲೆ. ರಾಮನ ವ್ಯಕ್ತಿತ್ವ ಜನಮಾನಸದಲ್ಲಿ ಒಂದು ಮಾದರಿಯಾಗಿ ನೆಲೆಯಾಗಿದೆ ಎಂದರು.