ಬೀರೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಗುಂಡಿ ಬಿದ್ದಿರುವ ಪ್ರವೇಶದ್ವಾರ. 
ಜಿಲ್ಲೆ

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಗುಂಡಿಗಳಿಂದ ಸ್ವಾಗತ

ಬೀರೂರು: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಪ್ರವೇಶದ್ವಾರದಲ್ಲಿರುವ ಗುಂಡಿಗಳಿಂದ ಪ್ರತಿದಿನ ಅಪಘಾತಗಳು ಸಂಭವಿಸುತ್ತಿದ್ದರೂ ಕೆಎಸ್‌ಆರ್‌ಟಿಸಿ, ಸ್ಥಳೀಯ ಆಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಮಚ್ಚಿಕುಳಿತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಬೀರೂರಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕಾರಣ ಪ್ರತಿ ದಿನ ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಬೆಂಗಳೂರು, ಹಾಸನ, ಮೈಸೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಶಿವಮೊಗ್ಗ, ಹೊನ್ನಾವರ ಸೇರಿದಂತೆ ಹತ್ತಾರು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನವಾಗಿದೆ. ಆದರೆ ಇಂತಹ ಪ್ರಮುಖ ನಿಲ್ದಾಣದಲ್ಲಿ ಮೂಲ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ.
ಬಸ್‌ಗಳು ನಿಲ್ದಾಣದ ಒಳಗೆ ಬಂದು ಹೋಗಲು ಪ್ರತ್ಯೇಕವಾದ ಎರಡು ಪ್ರವೇಶ ದ್ವಾರಗಳಿವೆ. ಎರಡು ದ್ವಾರಗಳಲ್ಲಿ ರಸ್ತೆ ಬಹಳ ದಿನಗಳಿಂದ ಗುಂಡಿಬಿದ್ದು ವಾಹನ ಸವಾರರಿಗೆ ತೊಂದರೆ ಉಂಟುಮಾಡಿದೆ. ಮಳೆ ಬರುತ್ತಿರುವ ಗುಂಡಿಯಲ್ಲಿ ನೀರು ನಿಂತು ಗುಂಡಿಯಾವುದು ರಸ್ತೆಯಾವುದು ಎಂದು ಕಾಣದಂತಾಗಿದೆ. ಬಸ್‌ನಿಲ್ದಾಣ ಒಳಕ್ಕೆ ಹೋಗುವ ಆತುರದಲ್ಲಿರುವ ಬಸ್‌ಚಾಲಕರು ವೇಗದಿಂದ ಬಂದು ತಿರುವು ಪಡೆದುಕೊಳ್ಳುವುದರಿಂದ ರಸ್ತೆಯ ಮೇಲೆ ಸಂಚರಿಸುತ್ತಿರುವ ವಾಹನ ಸವಾರರಿಗೆ ಗಂಡಿಯಲ್ಲಿ ನಿಂತ ನೀರು ಸಿಡಿಯುತ್ತಿದೆ.
ರಸ್ತೆ ಗುಂಡಿಗಳನ್ನು ಸರಿಪಡಿಸ ಬೇಕಾದ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲದಂತೆ ಇದ್ದಾರೆ. ಸಾರ್ವಜನಿಕರೂ ಕೂಡ ಇಲ್ಲಿನ ಸಮಸ್ಯೆ ಬಗ್ಗೆ ಯಾರ ಬಳಿ ಹೇಳಿಕೊಳ್ಳಬೇಕು ಎಂಬುವುದನ್ನು ತಿಳಿಯದೆ ಗುಂಡಿಯಲ್ಲಿ ಬಿದ್ದವರನ್ನು ಎಬ್ಬಿಸಿ ಮನೆಗೆ ಕಳುಹಿಸುತ್ತಿದ್ದಾರೆ.