ಜಿಲ್ಲೆ

ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತ

Mysuru - Desk - Ravikumar


ಮಡಿಕೇರಿ: ಸುಂಟಿಕೊಪ್ಪಕ್ಕೆ ಶುಕ್ರವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನೀಲ್‌ಕುಮಾರ್ ಹಾಗೂ ನಾನಾ ಇಲಾಖೆಯ ಅಧಿಕಾರಿಗಳು ಸ್ವಾಗತ ಕೋರಿ ಬರಮಾಡಿಕೊಂಡರು. ಶಾಲಾ ಮಕ್ಕಳ ಘೋಷಣೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ರಥ ಮೆರವಣಿಗೆ ಸಾಗಿತು.


ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಿ.ಯು. ಸರಳಾ ಮಾತನಾಡಿ, ಭಾರತ ಸಂವಿಧಾನ ಶ್ರೇಷ್ಠವಾದುದು. ಸರ್ವರಿಗೂ ಸಮಬಾಳು, ಸಮಪಾಲು ನೀಡುವ ಸಂವಿಧಾನವಾಗಿದೆ. ನಮ್ಮ ಸಂವಿಧಾನ ಮೂಲತಃ 395 ವಿಧಿಗಳು 8 ಪರಿಚ್ಛೇದಗಳು ಮತ್ತು 22 ಭಾಗಗಳಲ್ಲಿ ಬರೆಯಲಾಗಿದೆ. ಇದನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದರು.


ಸಂವಿಧಾನದಲ್ಲಿ ನಾಗರಿಕರ ಹಕ್ಕುಗಳು ಹಾಗೂ ಕರ್ತವ್ಯದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ನಾವೆಲ್ಲರೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನ ಆಶಯಗಳಿಗೆ ಅನುಗುಣವಾಗಿ ನಮ್ಮ ಹಕ್ಕು, ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.


ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಹಾಗೂ ಸಾಂಖಿಕ ಅಧಿಕಾರಿ ನಾರಾಯಣ್ ಅವರು ನೆರೆದಿದ್ದ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಭಾರತದ ಸಂವಿಧಾನದ ಪ್ರತಿಜ್ಞೆ ಬೋಧಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಶಬ್ಬೀರ್, ರಫೀಕ್‌ಖಾನ್ ಹಾಗೂ ಪಿ.ಎಫ್. ಸಬಾಸ್ಟೀನ್ ಭಾರತದ ಸಂವಿಧಾನ ಕುರಿತು ಮಾತನಾಡಿದರು.


ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ, ಐ.ಸೋಮನಾಥ, ನಾಗರತ್ನ ಸುರೇಶ್, ಪಿಡಿಒ ವಿ.ಜಿ.ಲೋಕೇಶ್, ಲೆಕ್ಕಪರಿಶೋಧಕಿ ಚಂದ್ರಕಲಾ, ಸಂಧ್ಯಾ, ಶ್ರೀನಿವಾಸ್, ಡಿ.ಎಂ.ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಭಾರತ ಸಂವಿಧಾನದ ವಿಷಯದ ಕುರಿತು ಶಾಲಾ, ಕಾಲೇಜು ಮಕ್ಕಳಿಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಇದೇ ವೇಳೆ ಪ್ರಶಂಸನಾ ಪತ್ರ ನೀಡಲಾಯಿತು.