ಜಿಲ್ಲೆ

ಕನ್ನಡ ಭಾಷೆ, ಸಂಸ್ಕೃತಿ ಉಳಿಸಿಲು ಶ್ರಮಿಸೋಣ

ಡಾ. ಕೆ.ವಿದ್ಯಾಕುಮಾರಿ ಆಶಯ

ಜ್ಯೋತಿ ರಥಯಾತ್ರೆಗೆ ಸ್ವಾಗತ

ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡ ನಮ್ಮ ಮಾತೃ ಭಾಷೆಯಾಗಿದ್ದು, ಮುಂದಿನ ಪೀಳಿಗೆಗೆ ಈ ಭಾಷೆಯ ಮಹತ್ವದ ಕುರಿತು ಮನದಟ್ಟು ಮಾಡುವ ಕೆಲಸವಾಗಬೇಕಿದೆ. ತನ್ಮೂಲಕ ಕನ್ನಡವನ್ನು ನಮ್ಮ ಉಸಿರಾಗಿಸಿಕೊಂಡು, ಕನ್ನಡದ ಸಂಸ್ಕೃತಿ ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕರೆ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಆವರಣಕ್ಕೆ ಸೋಮವಾರ ಆಗಮಿಸಿದ್ದ ಕರ್ನಾಟಕ ಸಂಭ್ರಮ-50ರ ನಿಮಿತ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆ ಸ್ವಾಗತಿಸಿ, ಕನ್ನಡ ತಾಯಿ ಭುನೇಶ್ವರಿಯ ಪುತ್ಥಳಿಗೆ ಪುಷ್ಪ ಅರ್ಚಿಸಿ ಮಾತನಾಡಿದರು.

ಉಡುಪಿಗೆ ಆಗಮಿಸಿದ್ದ ಕನ್ನಡ ಜ್ಯೋತಿ ರಥಯಾತ್ರೆಗೆ ಜಿಲ್ಲಾಡಳಿತದಿಂದ ಸ್ವಾಗತಿಸಲಾಯಿತು. ಡಾ. ಕೆ.ವಿದ್ಯಾಕುಮಾರಿ, ಡಾ. ಅರುಣಕುಮಾರ್​ ಕೆ., ಆನಂದ್​ ಕುಂದರ್​, ಪೂರ್ಣಿಮಾ, ನೀಲಾವರ ಸುರೇಂದ್ರ ಅಡಿಗ, ಗಣಪತಿ ಕೆ., ರಾಯಪ್ಪ ಇತರರಿದ್ದರು.

ಜನ ಜಾಗೃತಿ ರಥಯಾತ್ರೆ

ಕನ್ನಡ ತಾಯಿ ಭುನೇಶ್ವರಿಯ ಪುತ್ಥಳಿಗೆ ಡಾ. ಕೆ.ವಿದ್ಯಾಕುಮಾರಿ ಪುಷ್ಪ ಅರ್ಚಿಸಿದರು.

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಸಂಭ್ರಮ-50 ಆಚರಿಸುತ್ತಿದೆ. ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ಎಂಬ ಕಾರ್ಯಕ್ರಮದಡಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸುತ್ತಿದೆ. ಇದು ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದೆ ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಅರುಣಕುಮಾರ್​ ಕೆ., ಎಎಸ್ಪಿ ಸಿದ್ಧಲಿಂಗಪ್ಪ ಟಿ., ಪೌರಾಯುಕ್ತ ರಾಯಪ್ಪ, ಡಿಡಿಪಿಐ ಗಣಪತಿ ಕೆ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್​. ಲಮಾಣಿ, ಜಿಲ್ಲಾ ಕಸಾಪ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಕಾಲೇಜ್​ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡಪರ ಘೋಷಣೆಯೊಂದಿಗೆ ಮೆರವಣಿಗೆ ಸಾಗಿತು. ರಥಯಾತ್ರೆಗೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ನೀಡಿದವು. ಕನ್ನಡ, ನಾಡು -ನುಡಿಯ ಗೀತೆಗೆ ಅಧಿಕಾರಿಗಳೂ ಸಹ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ಕಲಿಕಾ ಮಾಧ್ಯಮವಾಗಲಿ

ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಮನೆಯಲ್ಲಿ ಮಾತೃ ಭಾಷೆ ಕನ್ನಡವನ್ನೇ ಮಾತನಾಡಬೇಕು. ಮಕ್ಕಳು ಕನ್ನಡದ ಪುಸಕ್ತ ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಪಾಲಕರು ಪ್ರೇರೇಪಿಸಬೇಕು. ಕನ್ನಡ ಭಾಷೆಯನ್ನು ಕಲಿಕಾ ಮಾಧ್ಯಮವಾದಾಗ ಮಾತ್ರ ಇಂತಹ ಕನ್ನಡ ಜ್ಯೋತಿ ರಥಯಾತ್ರೆಗೆ ಸಾರ್ಥಕತೆ ದೊರೆಯುತ್ತದೆ ಎಂದರು.

ಕನ್ನಡ ಸಾಹಿತ್ಯವನ್ನು, ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯವಾಗಬೇಕಿದೆ. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವಂತೆ ಸರ್ಕಾರ ಚಿಂತಿಸಬೇಕಿದೆ. ಮುಖ್ಯವಾಗಿ ಯುವಜನತೆಯಲ್ಲಿ ಕನ್ನಡ ಕಲಿಯುವಿಕೆಯ ತುಡಿತ, ಆಸಕ್ತಿಯನ್ನು ಹೆಚ್ಚಿಸುವಂತಹ ಕಾರ್ಯಕ್ರಮ ಆಯೋಜಿಸಬೇಕಿದೆ.| ಆನಂದ್​ ಕುಂದರ್​. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ.