ಜಿಲ್ಲೆ

8ನೇ ವೇತನ ಆಯೋಗ ರಚನೆಗೆ ಸ್ವಾಗತ

Dharwada - Basavaraj Idli

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಎಂಟನೇ ವೇತನ ಆಯೋಗ ರಚನೆ ಬಗ್ಗೆ ಘೋಷಿಸಿರುವುದನ್ನು ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾಸಂಘ (ಎಬಿಆರ್ಎಸ್ಎಂ) ಸ್ವಾಗತಿಸಿದೆ.

ಶಾಲಾ ಮಟ್ಟದಿಂದ ಉನ್ನತ ಶಿಕ್ಷಣದವರೆಗೆ ದೇಶಾದ್ಯಂತ ಶಿಕ್ಷಕರು ಈ ಮಹತ್ವದ ಘೋಷಣೆಗಾಗಿ ಕುತೂಹಲದಿಂದ ಕಾಯುತ್ತಿದ್ದರು. ವಿವಿಧ ವೇದಿಕೆ ಮತ್ತು ಸರ್ಕಾರದೊಂದಿಗಿನ ಸಭೆಗಳಲ್ಲಿ ಈ ವಿಚಾರವನ್ನು ಸಂ ಪ್ರಸ್ತಾಪಿಸುತ್ತ ಬಂದಿತ್ತು. ಇದೀಗ ಪ್ರಧಾನಿಯವರು ತೆಗೆದುಕೊಂಡ ಸಕಾರಾತ್ಮಕ ನಿರ್ಧಾರವು ಶಿಕ್ಷಣ ಕ್ಷೇತ್ರದ ಹಿತಾಸಕ್ತಿಗೆ ಪ್ರಮುಖ ಹೆಜ್ಜೆಯಾಗಿದೆ ಎಂದು ಎಬಿಆರ್ಎಸ್ಎಂನ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನಾರಾಯಣ ಲಾಲ ಗುಪ್ತಾ ತಿಳಿಸಿದ್ದಾರೆ.

ಎಬಿಆರ್ಎಸ್ಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ಗೀತಾ ಭಟ್ ಅವರು, ಹಿಂದಿನ ವೇತನ ಆಯೋಗವನ್ನು 2016ರಲ್ಲಿ ಜಾರಿಗೊಳಿಸಲಾಗಿತ್ತು. ಹತ್ತು ವರ್ಷಗಳಿಗೊಮ್ಮೆ ಆಯೋಗ ರಚಿಸುವ ಸಂಪ್ರದಾಯವನ್ನು ಕೇಂದ್ರ ಸರ್ಕಾರ ಎತ್ತಿ ಹಿಡಿದಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.

ಎಂಟನೇ ವೇತನ ಆಯೋಗವು ಹಣದುಬ್ಬರ ಮತ್ತು ಇತರ ಆರ್ಥಿಕ ಅಂಶಗಳನ್ನು ಪರಿಗಣಿಸಿ ಶಿಕ್ಷಕರು ಮತ್ತು ಉದ್ಯೋಗಿಗಳ ಹಿತಾಸಕ್ತಿ ಗಮನದಲ್ಲಿಟ್ಟು ಶಿಫಾರಸುಗಳನ್ನು ಪ್ರಸ್ತುತಪಡಿಸುವ ಭರವಸೆ ಇದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ ತಿಳಿಸಿದ್ದಾರೆ.