ಜಿಲ್ಲೆ

ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ, ಇಂಜಿನಿಯರ್ ಅಭಿಷೇಕ ಪಾಟೀಲ ಅಭಿಪ್ರಾಯ, ಹಿರೇಗೌಡರ ಕಾಲೇಜಿನಲ್ಲಿ ಸ್ವಾಗತ ಸಮಾರಂಭ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿನ ಉಣಕಲ್ಲನಲ್ಲಿರುವ ಐ.ಜಿ. ಹಿರೇಗೌಡರ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಶನಿವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಸಿವಿಲ್ ಇಂಜಿನಿಯರ್ ಅಭಿಷೇಕ ಸಿ. ಪಾಟೀಲ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಿಕ್ಷಣವು ಬಹಳ ಮಹತ್ವದ್ದಾಗಿದೆ. ಶಿಕ್ಷಣದ ಮೂಲಕ ಸಂಸ್ಕಾರ ಕಲಿತು ಗುರು ಹಿರಿಯರಿಗೆ ಗೌರವ ನೀಡುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.

ಅತಿಥಿಗಳಾಗಿದ್ದ ನವನಗರ ರೋಟರಿ ಸ್ಕೂಲ್ ಪ್ರಾಚಾರ್ಯ ಡಾ. ವಿಜಯಶ್ರೀ ಕಲಬುರ್ಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನ, ಸಮಯ ಪ್ರಜ್ಞೆ, ಮೃದು ಮಾತಿನ ಕೌಶಲ ಬೆಳೆಸಿಕೊಂಡು ಸಿಕ್ಕ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಅಂದಾಗ ಸಾಧನೆ ಸಾಧ್ಯವಾಗುತ್ತದೆ ಎಂದರು.

ಕಾಲೇಜಿನ ಕಾರ್ಯದರ್ಶಿ ಶಿವಕುಮಾರಗೌಡ ಬಿ.ಜಿ. ಪ್ರಾಸ್ತಾವಿಕ ಮಾತನಾಡಿದರು. ರಾಮಣ್ಣ ತಡಹಾಳ, ಆರ್.ವಿ. ಪಾಟೀಲ, ಆರ್.ಎಸ್. ಹನ್ನಿ, ಎಸ್.ಎಂ. ಸೋಮನಗೌಡ್ರ, ಪ್ರಾಚಾರ್ಯ ಮೇಘಾ ಎಂ.ಜೆ., ಸ್ಥಳಿಯ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಐಶ್ವರ್ಯ ಮಹೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ದಿವಾಂದರ ವಂದಿಸಿದರು.