ಜಿಲ್ಲೆ

ನುಡಿಜಾತ್ರೆಯಲ್ಲಿ ಮಂಡ್ಯದ ಹೆಗ್ಗುರುತು ಮೂಡಲಿ: ಚುಂಚಶ್ರೀ ಡಾ.ನಿರ್ಮಲಾನಂದನಾಥಸ್ವಾಮೀಜಿ ಕರೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಹೊರವಲಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸುವ ಜತೆಗೆ ಮಂಡ್ಯದ ಹೆಗ್ಗುರುತು ಮೂಡಿಸುವ ಕೆಲಸವಾಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಮಂಡ್ಯ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾಗತ ಸಮಿತಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಆಚಾರ ವಿಚಾರ, ಇಲ್ಲಿನ ಪ್ರೇಕ್ಷಣೀಯ, ಐತಿಹಾಸಿಕ ಸ್ಥಳದ ಮಹತ್ವ, ಐತಿಹ್ಯವನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾರುವ ಅವಕಾಶ ಇದೆ. ಇದಕ್ಕಾಗಿ ಒಂದು ಕ್ರಿಯಾಯೋಜನೆ ರೂಪಿಸಿ. ಮಂಡ್ಯಕ್ಕೆ ತನ್ನದೇ ಆದ ಗುರುತು ಸಿಗುವಂತ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನದ ಪೂರ್ವ ಸಿದ್ಧತೆಗಳ ಮಾಹಿತಿ ಪಡೆದ ಚುಂಚಶ್ರೀ, ಇದು ನಮ್ಮ ಹಬ್ಬ. ಮನೆಯ ಹಬ್ಬದಂತೆ ಆಚರಣೆ ಮಾಡಬೇಕು. ಜಿಲ್ಲೆಯ ಸಾಮಾನ್ಯ ಪ್ರಜೆ ಕೂಡ ಸಮ್ಮೇಳನದ ಪ್ರಚಾರ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ ತೊಡಗಿಕೊಳ್ಳುವಂತಾಗಬೇಕು. ಮಂಡ್ಯ ಹೃದಯ ಶ್ರೀಮಂತಿಕೆಗೆ ಹೆಸರುವಾಸಿ. ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ. ಹೀಗಾಗಿ ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಮಾದರಿಯಾಗಿರಬೇಕು ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಇದೊಂದು ಕನ್ನಡದ ಹಬ್ಬ. ಮಂಡ್ಯದಲ್ಲಿ ಮೂರನೇ ಬಾರಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿ ಜಿಲ್ಲೆಯ ಕೀರ್ತಿ ಎತ್ತಿಹಿಡಿಯೋಣ. ಸಭೆಯಲ್ಲಿ ವ್ಯಕ್ತಪಡಿಸಿದ ಎಲ್ಲ ಸಲಹೆಗಳನ್ನು ನೂರಕ್ಕೆ ನೂರು ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಗುರುಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ. ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಇರಲಿ. ಬೆಂಗಳೂರು, ಮೈಸೂರಿನ ಜತೆಗೆ ತಾಲೂಕು ಕೇಂದ್ರಗಳಿಂದಲೂ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, ವಿದೇಶದಲ್ಲಿ ಕೂಡ ಆಸಕ್ತಿಯಿಂದ ನೋಡುವ ಕನ್ನಡದ ಹಬ್ಬ ಇದು. ಮಾರ್ಗದರ್ಶಕ ಸೂಚಕದಂತೆ ಮಳಿಗೆ, ವೇದಿಕೆ ಸಿದ್ಧತೆ ಮಾಡಲಾಗುತ್ತದೆ. ಅಧ್ಯಕ್ಷರ ಆಯ್ಕೆ ಬಗ್ಗೆ ಎಲ್ಲೆಡೆ ಪ್ರಶಂಸೆ ಮಾತುಗಳು ವ್ಯಕ್ತವಾಗುತ್ತಿವೆ. ಸಾಹಿತ್ಯ ಸಮ್ಮೇಳನಕ್ಕೆ 18 ದೇಶದಿಂದ ಕನ್ನಡ ಪ್ರೇಮಿಗಳು ಆಗಮಿಸುತ್ತಿದ್ದು, ಮಂಡ್ಯದ ಸಾಹಿತ್ಯ ಸಮ್ಮೇಳನ ಅಂತಾರಾಷ್ಟ್ರೀಯ ಮಟ್ಟದ ಆಕರ್ಷಣೆ ಆಗಲಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ವೇದಿಕೆ, ಮಳಿಗೆ, ಆಹಾರ ವಿತರಣಾ ಕೌಂಟರ್, ಪಾರ್ಕಿಂಗ್‌ಗೆ ಸ್ಯಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ಜಾಗ ಗುರುತಿಸಲಾಗಿದೆ. ಕುಡಿಯುವ ನೀರು, ಶೌಚಗೃಹ, ಆಹಾರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಅಂಬೇಡ್ಕರ್ ಭವನ, ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 87 ಕಡೆ ಸ್ವಾಗತ ಕಮಾನುಗಳು ಇರಲಿವೆ. ಮುಂಜಾಗ್ರತಾ ಕ್ರಮವಾಗಿ ಹೆಲ್ತ್‌ಡೆಸ್ಕ್, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು. ನಗರದಿಂದ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಕೆ.ಎಂ.ಉದಯ್, ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ವಿವೇಕಾನಂದ, ನಗರಸಭೆ ಅಧ್ಯಕ್ಷ ಪ್ರಕಾಶ್, ಮಾಜಿ ಸಚಿವ ಸೋಮಶೇಖರ್, ಮಾಜಿ ಸಂಸದೆ ಸುಮಲತಾ, ಮಾಜಿ ಎಂಎಲ್‌ಸಿಗಳಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಇತರರಿದ್ದರು.

ಸ್ಥಳೀಯ ಕಲಾವಿದರಿಗೆ ಗೌರವಧನ ಹೆಚ್ಚಳ

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಕಲಾತಂಡಗಳ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ. ಐದು ಸಾವಿರ ರೂ ಇದ್ದ ಗೌರವಧನವನ್ನು ಹತ್ತು ಸಾವಿರ ರೂ,.ಗೆ ಹೆಚ್ಚಿಸಲಾಗಿದೆ. 471 ತಂಡದಿಂದ ಅರ್ಜಿ ಬಂದಿದ್ದು, 191 ತಂಡಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ನಾಡಗೀತೆ, ರೈತಗೀತೆ, ನಾಲ್ವಡಿ ಗೀತೆ ಹಾಡುವ 87 ಜನರಿಗೆ ಏಕರೂಪದ ವಸ್ತ್ರ ವಿತರಣೆ ಮಾಡುವುದರ ಜತೆಗೆ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಹಾಗೂ ಸಮ್ಮೇಳನದ ಪ್ರಚಾರಕ್ಕಾಗಿ ಡಿ.18, 19ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು ಎಂದರು.