ಬಸವಕಲ್ಯಾಣ: ಸಾಂಪ್ರದಾಯಿಕ ಓದು ಬದುಕಿನ ದಾರಿಯಾಗಬೇಕು. ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಮೌಲ್ಯಾಧಾರಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.
ನಗರದ ಶ್ರೀ ಬಸವೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ, ವೈಜ್ಞಾನಿಕವಾಗಿ ಆಲೋಚಿಸುವಂತೆ ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಪದವಿಗಳಿಂದ ಬದುಕು ರೂಪಿಸಿಕೊಳ್ಳಬೇಕು. ಸಾಮಾಜಿಕ ಪರಿವರ್ತನೆಗೆ ಕೊಡುಗೆಯಾಗಿ ಶ್ರಮಿಸುವ, ದೇಶದ ಸಂಪನ್ಮೂಲಗಳ ಅಭಿವೃದ್ಧಿ ಪಡಿಸುವ ಕೆಲಸ ಶಿಕ್ಷಣದಿಂದ ನಡೆಯುತ್ತದೆ ಎಂದರು
ಬೀದರ್ ವಿಶ್ವವಿದ್ಯಾಲಯ ಕಲಾ ವಿಭಾಗದ ಡೀನ್ ಪ್ರೊ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ವೇಗವಾಗಿ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಇಳಿಯಬೇಕಾಗಿದೆ. ಬದುಕಿನಲ್ಲಿ ಏನೇ ಸಮಸ್ಯೆ,ಸವಾಲುಗಳು ಬಂದರೂ ಪ್ರತಿಭಾವಂತರು ಅದನ್ನು ಎದುರಿಸುತ್ತಾರೆ. ಅಂಥ ಸಾಮರ್ಥ್ಯ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಶ್ರೀ ಬಸವೇಶ್ವರ ಪದವಿ ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಓದು ಅಧ್ಯಯನಗಳ ಮೂಲ ಆಶಯ ಮನುಷ್ಯನಲ್ಲಿ ಬೌದ್ಧಿಕ, ವಿವೇಚನಾತ್ಮಕ ಮತ್ತು ಸಂಶೋಧನಾತ್ಮಕ ಅರಿವು ಹೆಚ್ಚಿಸುವುದು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ಸತತ ಅಭ್ಯಾಸದಿಂದ ಚಿಕಿತ್ಸಕ ಆಲೋಚನೆ ಬೆಳೆಯುತ್ತದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮತ್ತು ಬದುಕನ್ನು ಸಹಜವಾಗಿ ಸ್ವೀಕರಿಸಲು ಬೇಕಾದ ತಿಳುವಳಿಕೆ ಅಧ್ಯಯನದಿಂದ ಪಡೆಯಬೇಕಾಗಿದೆ ಎಂದರು.
ನಸೀಮಾ ಹಾರಕುಡ, ಸಚ್ಚಿನ ಮೇತ್ರೆ ಮತ್ತು ಸುಶೀಲಾ ಜಾಧವ್ ಮಾತನಾಡಿದರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕ ಕಾಶಪ್ಪ ಸಕ್ಕರಭಾವಿ, ಅಕ್ಕ ಮಹಾದೇವಿ ಕಾಲೇಜಿನ ಪ್ರಾಚಾರ್ಯೆ ಮಾಯಾ ಮುರಾಳೆ, ಬಸವೇಶ್ವರ ಪಿಯು ಕಾಲೇಜು ಪ್ರಾಚಾರ್ಯ ಡಾ.ರುದ್ರಮಣಿ ಮಠಪತಿ ಇತರರಿದ್ದರು. ಪ್ರಾಚಾರ್ಯೆ ಡಾ.ಶಾಂತಲಾ ಪಾಟೀಲ್ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಿಸಿ ವಂದಿಸಿದರು.
ಲಿಂಗೈಕ್ಯರಾದ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಡಾ.ಅನ್ನಪೂರ್ಣ ತಾಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಚನ ಸಾಹಿತ್ಯದ ಮೂಲಕ ಹೊಸ ತಿಳುವಳಿಕೆ ಮೂಡಿಸಿ, ವೈಚಾರಿಕ ವೈಜ್ಞಾನಿಕ ಪ್ರಜ್ಞೆಯನ್ನು ವಿಸ್ತರಿಸಿದ ನೆಲ ಕಲ್ಯಾಣ. ಇಲ್ಲಿ ಅಕ್ಷರ, ಜ್ಞಾನ ಮತ್ತು ಅನ್ನವನ್ನು ದಾಸೋಹದ ಚೌಕಟ್ಟಿನಲ್ಲಿ ಇರಿಸಲಾಗಿದೆ. ಅರಿವನ್ನು ತಾತ್ವಿಕ ಆಯಾಮದಲ್ಲಿ ನಿರ್ವತ್ತಿಸಲಾಗಿದೆ
| ಪ್ರೊ.ಬಿ.ಎಸ್.ಬಿರಾದಾರ ಕುಲಪತಿ ಬೀದರ್ ವಿಶ್ವವಿದ್ಯಾಲಯದ