ಮೈಸೂರು: ಎಲ್ಲರ ನಿರ್ಲಕ್ಷೃಕ್ಕೆ ಗುರಿಯಾಗಿ ಕುದರೆ ಲಾಯವಾಗಿ ಮಾರ್ಪಾಡು ಹೊಂದಿದ್ದ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಅತಿಥಿಗೃಹಕ್ಕೆ ಸೇರಿದ ಪಾರಂಪರಿಕ ಸ್ವಾಗತ ಕಮಾನು ಕಟ್ಟಡವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗುರುವಾರ ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ವಾಗತ ಕಮಾನಿನ ದುಸ್ಥಿತಿಯ ಕುರಿತು ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಬುಧವಾರದ ಸಂಚಿಕೆಯಲ್ಲಿ ‘ಕುದುರೆ ಲಾಯವಾದ ಸ್ವಾಗತ ಕಮಾನು’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿಗೆ ಸ್ಪಂದಿಸಿದ ಮೇಯರ್ ಶಿವಕುಮಾರ್, ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿ ಸ್ಥಳದಲ್ಲಿದ್ದ ಕುದುರೆಗಳನ್ನು ತೆರವುಗೊಳಿಸಿದ್ದರು. ಅಲ್ಲದೆ, ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಅವರೊಂದಿಗೆ ಮಾತುಕತೆ ನಡೆಸಿದ್ದರು.
ಪಾರಂಪರಿಕ ಕಟ್ಟಡ ದುಸ್ಥಿತಿಗೆ ತಲುಪಿದ್ದು, ಕೆಲವು ಕಡೆ ಬಿರುಕು ಸಹ ಬಿಟ್ಟಿದೆ, ಪ್ಲಾಸ್ಟರಿಂಗ್ ಕಿತ್ತು ಬಂದಿದೆ. ಕಟ್ಟಡದ ಸಂಪೂರ್ಣ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಂಡು ಸಂರಕ್ಷಣಾ ಕಾರ್ಯದ ನಂತರ ಕಟ್ಟಡದ ಸುತ್ತ ಗ್ರಿಲ್ ಅಳವಡಿಸಿ ಯಾರು ಸಹ ಕಟ್ಟಡದ ಒಳಗಡೆ ಪ್ರವೇಶಿದಂತೆ ಮಾಡುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಮತ್ತೆ ಕಟ್ಟಡ ದುರ್ಬಳಕೆಯಾಗುವ ಸಾಧ್ಯತೆ ಇದೆ.
ಕಟ್ಟಡದ ಮೇಲ್ಭಾಗದಲ್ಲಿ ಗಿಡಗಳು ಬೆಳೆದು ಕಟ್ಟಡ ಮತ್ತಷ್ಟು ದುಸ್ಥಿತಿಗೆ ತಲುಪಲು ಕಾರಣವಾಗಿತ್ತು. ಗುರುವಾರ ಪಾಲಿಕೆ ಸಿಬ್ಬಂದಿ ಕಟ್ಟಡದಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಿ ಕಟ್ಟಡವನ್ನು ಶುಚಿಗೊಳಿಸುವ ಕಾರ್ಯ ಮಾಡಿದರು. ಇದೇ ರೀತಿ ಮಹಾರಾಣಿ ಮಹಿಳಾ ಕಾಲೇಜಿನಲ್ಲಿರುವ ಸ್ವಾಗತ ಕಮಾನು ಸಹ ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ಈ ಕಟ್ಟಡವನ್ನು ಸಹ ಸಂರಕ್ಷಣೆ ಮಾಡಲು ಉದ್ದೇಶಿಸಲಾಗಿದೆ.
ಸರ್ಕಾರಿ ಅತಿಥಿ ಗೃಹದ ಸ್ವಾಗತ ಕಮಾನು ಕಟ್ಟಡದ ಪ್ಲಾಸ್ಟರಿಂಗ್ ಕಿತ್ತು ಬಂದಿದ್ದು, ಸಂಪೂರ್ಣ ರೀ ಪ್ಲಾಸ್ಟರಿಂಗ್ ಆಗಬೇಕಾಗಿದೆ. ಗೋಡೆಗಳು ಕೆಲವೆಡೆ ಬಿರುಕು ಬಿಟ್ಟಿದ್ದು, ಪಂಚಲೋಹದ ಕ್ಲಾೃಂಪ್ ಬಳಸಿ ವಾಲ್‌ಸ್ಟಿಚ್ಚಿಂಗ್ ಮಾಡಿ ಗೋಡೆಯನ್ನು ಸದೃಢಗೊಳಿಸುವ ಕಾರ್ಯ ಆಗಬೇಕು. ಈ ಕಟ್ಟಡದ ಸಂರಕ್ಷಣಾ ಕಾರ್ಯಕ್ಕೆ ಮೇಯರ್ ಶಿವಕುಮಾರ್ ವಿಶೇಷ ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲಿಯೇ ಸಂರಕ್ಷಣಾ ಕಾರ್ಯದ ಡಿಪಿಆರ್ ತಯಾರಿಸಿ ಮೇಯರ್‌ಗೆ ಸಲ್ಲಿಸಲಾಗುವುದು. ಶುಕ್ರವಾರ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡವನ್ನು ಸಮಗ್ರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಾಗುವುದು.
ಡಾ.ಎನ್.ಎನ್. ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ
ಸ್ವಾಗತ ಕಮಾನು ಕಟ್ಟಡದ ಸಂರಕ್ಷಣಾ ಕಾರ್ಯವನ್ನು ನಗರ ಪಾಲಿಕೆಯಿಂದ ಕೈಗೊಳ್ಳಲಾಗುವುದು. ಸಂರಕ್ಷಣಾ ಕಾಮಗಾರಿಯ ಡಿಪಿಆರ್ ತಯಾರಿಸಿ ನೀಡುವಂತೆ ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಅವರಲ್ಲಿ ಮನವಿ ಮಾಡಲಾಗಿದೆ. ಡಿಪಿಆರ್ ಕೈಸೇರಿದ ಕೂಡಲೇ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. 15 ದಿನಗಳ ಒಳಗೆ ಕಟ್ಟಡದ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.
ಶಿವಕುಮಾರ್, ಮೇಯರ್