ಜಿಲ್ಲೆ

ದಸರೆಯೊಳಗೆ ಸ್ವಾಗತ ಕಮಾನಿಗೆ ಕಾಯಕಲ್ಪ

ಮೈಸೂರು: ನಗರದ ಸರ್ಕಾರಿ ಅತಿಥಿ ಗೃಹ ಮತ್ತು ಮಹಾರಾಣಿ ಮಹಿಳಾ ಕಾಲೇಜಿನ ಪಾರಂಪರಿಕ ಸ್ವಾಗತ ಕಮಾನು, ವೀರನಗೆರೆಯ ಪಾರಂಪರಿಕ ಕಾವಲುಗೋಪುರದ ಕಾಯಕಲ್ಪ ಕಾಮಗಾರಿ ಮತ್ತು ಲಲಿತಮಹಲ್ ರಸ್ತೆಯ ಪಾರಂಪರಿಕ ಸ್ವಾಗತ ದ್ವಾರದ ಸ್ಥಳಾಂತರ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಂಡು ದಸರೆಯೊಳಗೆ ಪುರ್ಣಗೊಳಿಸಲು ನಗರ ಪಾಲಿಕೆ ನಿರ್ಧರಿಸಿದೆ.

ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ನಗರದ ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಸ್ವಾಗತ ಕಮಾನಿನ ದುಸ್ಥಿತಿಯ ಕುರಿತು ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಜು.26 ರ ಸಂಚಿಕೆಯಲ್ಲಿ ‘ಕುದುರೆ ಲಾಯವಾದ ಸ್ವಾಗತ ಕಮಾನು’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿಗೆ ಸ್ಪಂದಿಸಿದ ಮೇಯರ್ ಶಿವಕುಮಾರ್, ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಸ್ವಾಗತ ಕಮಾನಿನ ಜತೆಗೆ ಮಹಾರಾಣಿ ಮಹಿಳಾ ಕಾಲೇಜಿನಲ್ಲಿರುವ ಪಾರಂಪರಿಕ ಸ್ವಾಗತ ಕಮಾನು, ವೀರನಗೆರೆಯಲ್ಲಿರುವ ಪಾರಂಪರಿಕ ಕಾವಲು ಗೋಪುರದ ಕಾಯಕಲ್ಪ ನೀಡಲು ಹಾಗೂ ಲಲಿತಮಹಲ್ ರಸ್ತೆಯ ಸ್ವಾಗತ ದ್ವಾರ ಸ್ಥಳಾಂತರಿಸುವ ನಿರ್ಧಾರ ಕೈಗೊಂಡರು.

2.75 ಕೋಟಿ ರೂ.ಮೊತ್ತ

ಪಾರಂಪರಿಕ ಕಟ್ಟಡಗಳ ಕಾಯಕಲ್ಪ ಹಾಗೂ ಸ್ಥಳಾಂತರ ಕಾಮಗಾರಿಗೆ ಒಟ್ಟು 2.75 ಕೋಟಿ ರೂ.ಮೊತ್ತದ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ನಗರ ಪಾಲಿಕೆ ಸಿದ್ಧಪಡಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಪಾರಂಪರಿಕ ಸಮಿತಿಗೆ ಸೋಮವಾರ ಸಲ್ಲಿಸಲಾಗಿದೆ. ಸಮಿತಿಯ ಅನುಮೋದನೆ ಪಡೆದ ಬಳಿಕ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಪಾಲಿಕೆ ನಿರ್ಧರಿಸಿದೆ.

ಕಟ್ಟಡ ಸ್ಥಳಾಂತರ

ಲಲಿತಮಹಲ್ ಪ್ಯಾಲೆಸ್‌ಗೆ ತೆರಳುವ ಮಾರ್ಗದಲ್ಲಿರುವ ಪಾರಂಪರಿಕ ಸ್ವಾಗತ ದ್ವಾರದಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪಾರಂಪರಿಕ ಸ್ವಾಗತ ದ್ವಾರವನ್ನು ಪಕ್ಕಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಸ್ವಾಗತ ದ್ವಾರ ಸ್ಥಳಾಂತರದಿಂದ ಒಟ್ಟು 30 ಅಡಿಗಳಷ್ಟು ರಸ್ತೆ ವಿಸ್ತರಣೆಯಾಗಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.

ಸೆಲ್ಫಿ ಪಾಯಿಂಟ್

ನಗರದ ವಿನೋಬಾ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಆವರಣದಲ್ಲಿರುವ ಪಾರಂಪರಿಕ ಸ್ವಾಗತ ಕಮಾನು ದುಸ್ಥಿತಿಯಲ್ಲಿದ್ದು, ಈ ಸ್ವಾಗತ ಕಮಾನಿಗೆ ಕಾಯಕಲ್ಪ ನೀಡಿ ಸ್ವಾಗತ ಕಮಾನಿನ ಬಳಿಯಲ್ಲಿ ಮೈಸೂರು ಸಂಸ್ಥಾನದ ಮಹಾರಾಣಿಯಾಗಿದ್ದ ಕೆಂಪನಂಜಮ್ಮಣಿ ವಾಣಿವಿಲಾಸ ಸನ್ನಿಧಾನ ಅವರ ಪ್ರತಿಮೆಯೊಂದನ್ನು ನಿರ್ಮಿಸಿ ಆ ಜಾಗವನ್ನು ಸೆಲ್ಫಿ ಪಾಯಿಂಟ್‌ಆಗಿ ಪರಿವರ್ತಿಸಲಾಗುವುದು.
ನಗರದ ಸರ್ಕಾರಿ ಅತಿಥಿ ಗೃಹದ ಸ್ವಾಗತ ಕಮಾನಿನ ಕಟ್ಟಡವನ್ನು ಕೆಲವರು ಕುದುರೆ ಲಾಯವಾಗಿ ಪರಿವರ್ತಿಸಿದ್ದರು. ಕುದುರೆಗಳನ್ನು ಕಟ್ಟಿಹಾಕಿದ ಪರಿಣಾಮ ಗೋಡೆಗಳು ಕಿತ್ತುಬಂದು ಕಟ್ಟಡ ಸಂಪೂರ್ಣ ದುಸ್ಥಿತಿಗೆ ತಲುಪಿದೆ. ಈ ಸ್ವಾಗತ ಕಮಾನು ಇದೀಗ ಕಾಯಕಲ್ಪ ಕಾಣಲಿದೆ. ಸ್ವಾಗತ ಕಮಾನುಗಳ ಕಾಯಕಲ್ಪ ಕಾಮಗಾರಿಯ ಬಳಿಕ ಅವುಗಳಿಗೆ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ.

ಸ್ವಾಗತ ಕಮಾನುಗಳು ಕಾಯಕಲ್ಪ ಹಾಗೂ ಸ್ಥಳಾಂತರ ಕಾಮಗಾರಿಗೆ ಒಟ್ಟು 2.75 ಕೋಟಿ ರೂ.ಮೊತ್ತದ ಡಿಪಿಆರ್ ತಯಾರಿಸಲಾ ಗಿದ್ದು, ಸೋಮವಾರ ಡಿಪಿಆರ್‌ಅನ್ನು ಜಿಲ್ಲಾ ಪಾರಂಪರಿಕ ಸಮಿತಿಗೆ ಕಳುಹಿಸಿಕೊಡಲಾಗಿದೆ. ಕಾಮಗಾರಿ ಕೈಗೊಳ್ಳಲು ಆದಷ್ಟು ಬೇಗ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಲಾಗುವುದು. ಶೀಘ್ರದಲ್ಲೇ ಕಾಮಗಾರಿ ಕೈಗೊಂಡು ದಸರೆಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ.
ಶಿವಕುಮಾರ್, ಮೇಯರ್

ನಗರದಲ್ಲಿ ದುಸ್ಥಿತಿಯಲ್ಲಿರುವ ಪಾರಂಪರಿಕ ಸ್ವಾಗತ ಕಮಾನುಗಳ ಕಾಯಕಲ್ಪ ಕಾಮಗಾರಿ ಕೈಗೊಳ್ಳಲು ಕಟ್ಟಡಗಳನ್ನು ಸಮಗ್ರವಾಗಿ ಪರಿಶೀಲಿಸಿ ಡಿಪಿಆರ್ ಸಿದ್ಧಪಡಿಸಿ ನಗರ ಪಾಲಿಕೆಗೆ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲಿಯೇ ಅಲ್ಪಾವಧಿಯ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡುವ ಭರವಸೆಯನ್ನು ಮೇಯರ್ ಶಿವಕುಮಾರ್ ನೀಡಿದ್ದಾರೆ. ಟೆಂಡರ್‌ಗೆ ಅನುಮೋದನೆ ದೊರೆತ ತಕ್ಷಣ ಕಾಮಗಾರಿಗೆ ಚಾಲನೆ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಡಾ.ಎನ್.ಎಸ್. ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ