ದೇವದುರ್ಗ: ಕರೊನಾ ತಡೆಗೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶನಿವಾರ ನಡೆಯಬೇಕಿದ್ದ ಸಂತೆ ಬಂದ್ ಆಗಿದೆ. ಕರ್ಫ್ಯೂ ಯಶಸ್ವಿಗೆ ತಾಲೂಕು ಆಡಳಿತ ಹಾಗೂ ಪುರಸಭೆ ಮುಂದಾಗಿದ್ದು, ಅಂಗಡಿ ಮುಂಗಟ್ಟು ಬಂದ್ ಮಾಡಿಸಿದೆ.
ಇಲ್ಲಿನ ಮಿನಿವಿಧಾನಸೌಧ ಮುಂಭಾಗದಲ್ಲಿ ಅರ್ಧ ಕಿಮೀವರೆಗೆ ಪ್ರತಿ ಶನಿವಾರ ಭರ್ಜರಿಯಾಗಿ ಸಂತೆ ನಡೆಯುತ್ತಿತ್ತು. ವೀಕೆಂಡ್ ಕರ್ಫ್ಯೂ ನಿಮಿತ್ತ ಪುರಸಭೆ ಒಂದು ದಿನದ ಮುಂಚೆ ಕರ್ಫ್ಯೂ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿತು. ಅಲ್ಲದೆ, ಶನಿವಾರ ಬೆಳಗ್ಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಸರ್ಕಲ್‌ನಲ್ಲಿ ಪುರಸಭೆ ಕಸದ ಟ್ರ್ಯಾಕ್ಟರ್, ತಳ್ಳುವ ಬಂಡಿ ಅಡ್ಡ ನಿಲ್ಲಿಸಿ, ವ್ಯಾಪಾರ ನಡೆಯದಂತೆ ತಡೆದರು.
ಆಸ್ಪತ್ರೆ, ಔಷಧ ಅಂಗಡಿ, ತರಕಾರಿ, ಕಿರಾಣಿ ಅಂಗಡಿ, ಮಿಲ್ಕ್ ಸ್ಟಾಲ್‌ಗೆ ಅವಕಾಶ ನೀಡಿ, ಉಳಿದ ವ್ಯಾಪಾರಿ ಮಳಿಗೆಗಳನ್ನು ಪುರಸಭೆ ಸಿಬ್ಬಂದಿ ಬಲವಂತಾಗಿ ಮುಚ್ಚಿಸಿದರು. ಮಾಹಿತಿ ಇಲ್ಲದೆ ಸಂತೆಗೆ ಬಂದಿದ್ದ ತರಕಾರಿ ವ್ಯಾಪಾರಿಗಳು, ಬಸವ ಕಾಲೇಜು ಆವರಣ, ಬಸ್ ನಿಲ್ದಾಣ ಪಕ್ಕದಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸಿದರು.