ಜಿಲ್ಲೆ

ದುರ್ಬಲ ಪಕ್ಷಗಳಿಂದ ಮೈತ್ರಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ದುರ್ಬಲವಾಗಿವೆ. ಹೀಗಾಗಿ, ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಎದುರಾಳಿಗಳಾಗಿದ್ದರು. ಇದೀಗ ಮೈತ್ರಿ ಎನ್ನುತ್ತಿದ್ದಾರೆ. ಈ ರೀತಿಯ ವರ್ತನೆಯಿಂದ ಎರಡೂ ಪಕ್ಷಗಳು ಜನರ ನಂಬಿಕೆ ಕಳೆದುಕೊಳ್ಳುತ್ತವೆ ಎಂದರು.

ಮೈತ್ರಿ ವಿಷಯದಲ್ಲಿ ಬಿಜೆಪಿಯದ್ದು ಸದಾ ದ್ವಂದ್ವ ನೀತಿ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ ಸಾವಿರಾರು ಕೋಟಿ ರೂ. ಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು. ಒಂದೇ ತಿಂಗಳಲ್ಲಿ ಅವರನ್ನು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸೇರಿಸಿಕೊಂಡರು ಎಂದು ವ್ಯಂಗ್ಯವಾಡಿದರು.

ರಾಜಕೀಯ ಪಕ್ಷಕ್ಕೆ ಗಟ್ಟಿ ನಿರ್ಧಾರಗಳು ಇರಬೇಕು. ಇಂದು ಟೀಕೆ ಮಾಡಿದ ಪಕ್ಷಗಳೊಂದಿಗೆ ಮುಂದೊಂದು ದಿನ ಮೈತ್ರಿ ಮಾಡಿಕೊಳ್ಳುವುದು. ಇಂತಹ ಮೈತ್ರಿಯಲ್ಲಿ ಅರ್ಥವಿಲ್ಲ ಎಂದರು.

ಉಡುಪಿಯ ಬೈಂದುರು ಶಾಸಕ ಸುಕುಮಾರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್​ನತ್ತ ಮುಖಮಾಡುತ್ತಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ವರ್ಚಸ್ಸು ಮೇಲೇರುತ್ತಿದ್ದು, ಬಿಜೆಪಿಯದ್ದು ಕುಸಿಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ರಾಜಕೀಯ ದ್ರುವೀಕರಣ ಆಗಲಿದೆ. ಇದರಿಂದ ಬಿಜೆಪಿಗೆ ಹೆದರಿಕೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷಾಂತರ ನಡೆಯಲಿದೆ ಎಂದರು.