ಜಿಲ್ಲೆ

ಮತಗಟ್ಟೆಗಳ ಸುಸಜ್ಜತೆಗೆ ವಾರದ ಗಡುವು

ಚಿತ್ರದುರ್ಗ: ತಮ್ಮ ಜವಾಬ್ದಾರಿ ಅರಿತು ವಿಧಾನಸಭಾ ಚುನಾವಣೆ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಬುಧವಾರ ಚುನಾವಣೆ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಚುನಾವಣೆ ಯಶಸ್ಸಿಗೆ ಮತಗಟ್ಟೆಗಳೇ ಮೂಲ ಆಧಾರ ಎಂದರು. ಮತಗಟ್ಟೆಗಳ ಬದಲಾವಣೆ ಅಥವಾ ಸ್ಥಳಾಂತರಕ್ಕೆ ಈಗ ಅವಕಾಶವಿಲ್ಲ. ಆದ್ದರಿಂದ ಶೌಚಗೃಹ, ರ‌್ಯಾಂಪ್, ವಿದ್ಯುತ್ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಒಂದು ವಾರದೊಳಗಾಗಿ ಜಿಲ್ಲೆಯ ಎಲ್ಲ ಮತಗಟ್ಟೆಗಳು ಸುಸಜ್ಜಿತಗೊಳಿಸಬೇಕು.

ಈ ಕುರಿತು ನಿಯೋಜಿತ ಚುನಾವಣಾ ಅಧಿಕಾರಿಗಳು ದೃಢೀಕರಣ ನೀಡಬೇಕು ಎಂದು ಹೇಳಿದರು. ಅಧಿಸೂಚನೆ ಪ್ರಕಟಣೆಯಿಂದ ಮರುಕ್ಷಣವೇ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಚುನಾವಣೆ ನಿಯೋಜಿತ ಅಧಿಕಾರಿಗಳು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ, ಗುರುತಿನ ಕಾರ್ಡ್ ಇಲ್ಲ, ಮತಗಟ್ಟೆಯಾವುದೆಂದು ಗೊತ್ತಿಲ್ಲ ಇತ್ಯಾದಿ ದೂರುಗಳು ಬರಬಾರದು.

ಮನೆ, ಮನೆಗಳಿಗೆ ಭೇಟಿ ನೀಡಿ, ಮತದಾರರನ್ನು ಜಾಗೃತಗೊಳಿಸಬೇಕು. ಈ ಹಿಂದಿನ ಚುನಾವಣೆಗಳಲ್ಲಿ ಸರಾಸರಿ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳ ಅವಲೋಕನ ನಡೆಸಿ, ಮತದಾನ ಪ್ರಮಾಣ ಹೆಚ್ಚಿಸಬೇಕು. ಡಂಗೂರ ಹಾಕಿಸಿದ್ದೇವು, ಬೀದಿ ನಾಟಕ ಪ್ರದರ್ಶಿಸಿದ್ದೇವು ಎಂದೆಲ್ಲ ಹೇಳಿದರೆ ಒಪ್ಪಲಾಗದು. ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ನಡೆಸುವುದರೊಂದಿಗೆ ಮತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ‌್ಯ ಚಾಲ್ತಿಯಲ್ಲಿದ್ದು, 18 ವರ್ಷ ವಯಸ್ಸು ಪೂರ್ಣಗೊಂಡವರು ಹೆಸರು ಸೇರಿಸಲು ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕವೂ ಸಲ್ಲಿಸಲು ಅವಕಾಶವಿದೆ. ಇಂತಹ ಅರ್ಜಿಗಳನ್ನು ಆಯಾ ತಹಸೀಲ್ದಾರರು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ಎಸಿ ಗಮನಕ್ಕೆ ತಂದ ಬಳಿಕವೇ ಪಟ್ಟಿಯಿಂದ ಹೆಸರು ತೆಗೆದುಹಾಕಲು ಸ್ವೀಕೃತವಾಗುವ ಅರ್ಜಿಗಳ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳ ಬೇಕು. ಇದಕ್ಕೂ ಮೊದಲು ಶಿರಸ್ತೇದಾರರು ಮತಗಟ್ಟೆಗೆ ಖುದ್ದು ಭೇಟಿ ನೀಡಿ, ಪ್ರಮಾಣಿಕರಿಸಬೇಕು. ಇಲ್ಲವಾದಲ್ಲಿ ಯಾವುದೇ ಹೆಸ ರುಗಳನ್ನು ಡಿಲೀಟ್ ಮಾಡುವಂತಿಲ್ಲ ಎಂದರು.

ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಸ್ಥಳಗಳಲ್ಲಿ ವ್ಯವಸ್ಥೆಗಳು ಸರಿಯಾಗಿರಲಿ. ಚುನಾವಣಾ ವೀಕ್ಷಕರ ವಾಸ್ತವ್ಯದ ಸ್ಥಳಗಳ ನಿಗದಿ, ಅವರಿಗೆ ಲೈಜನಿಂಗ್ ಅಧಿಕಾರಿಗಳ ನೇಮಕವಾಗಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ಎಡಿಸಿ ಟಿ.ಜವರೇಗೌಡ, ಆರ್.ಚಂದ್ರಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಬಿ.ಆನಂದ್, ಜಂಟಿಕೃಷಿ ನಿರ್ದೇಶಕ ರಮೇಶ್ ಕುಮಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.