ಜಿಲ್ಲೆ

ಮಹಾಮಸ್ತಕಾಭಿಷೇಕ ವೆಬ್​ಸೈಟ್ ಸಿದ್ಧ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ 2025ರ ಜನವರಿ 15ರಿಂದ 26ರವರೆಗೆ ಆಯೋಜಿಸಿರುವ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕ ಹಾಗೂ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಬರುವವರ ಅನುಕೂಲಕ್ಕಾಗಿ ವೆಬ್​ಸೈಟ್ ಸಿದ್ಧಪಡಿಸಲಾಗಿದೆ ಎಂದು ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆಬ್​ಸೈಟ್​ನಲ್ಲಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಮಾಡಿರುವ ವ್ಯವಸ್ಥೆಯನ್ನು ಕಾಲಕಾಲಕ್ಕೆ ಪ್ರಚುರ ಪಡಿಸಲಾಗುವುದು ಎಂದರು.

12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಅಂತಾರರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ದೇಶ-ವಿದೇಶದಿಂದ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜೈನ ಸಾಹಿತ್ಯ ಸಮ್ಮೇಳನ, ಸಂಗೀತ ಕಾರ್ಯಕ್ರಮ, ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಬಿಎಸ್​ವೈ, ಸಿದ್ದರಾಮಯ್ಯ ಪರ ಪ್ರಾರ್ಥನೆ

ಮುಡಾ,ವಾಲ್ಮೀಕಿ ಹಗರಣ ಹಾಗೂ ಗಂಗೇನಹಳ್ಳಿ ಡಿನೋಟಿಫೈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ದೋಷಮುಕ್ತರಾಗಿ ಹೊರಬರಲಿ ಎಂದು ಪ್ರಾರ್ಥಿಸಲಾಗುವುದು. ಸಿದ್ದರಾಮಯ್ಯ ಉತ್ತಮ ಆಡಳಿತಗಾರರು. ಪ್ರಾಮಾಣಿಕವಾಗಿ ರಾಜ್ಯದ ಅಭಿವೃದ್ಧಿ ಗೆ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಂತೆ ಅವರಿಗೆ ಮಾಡಬಾರದು ಎಂದರು.

ಜೈನ ಸಮಾಜದಿಂದ ನಡೆಯವ ಕ್ಷಮಾವಳಿ ಪರ್ವ ರಾಷ್ಟ್ರೀಯ ಕಾರ್ಯಕ್ರಮವಾಗಬೇಕು. ತಪ್ಪು ಮಾಡಿದವರನ್ನು ಕ್ಷಮಿಸುವುದು ದೊಡ್ಡ ಗುಣ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ಷಮಾವಳಿ ದಿನ ಆಚರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಿರುಪತಿ ಸರ್ವಧರ್ಮಗಳ ಶಕ್ತಿ ಕೇಂದ್ರ. ತಿರುಪತಿ ಪ್ರಸಾದ ಲಾಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಇರುವ ತುಪ್ಪ ಬಳಕೆ ಮಾಡಿದ್ದಾರೆಂದು ವರದಿಯಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಿ ತಪ್ಪಿತಸ್ಥ ರಿಗೆ ಕಠಿಣ ಶಿಕ್ಷೆ ಆಗಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಆಚಾರ್ಯ ಮುನಿಸಾಗರ ಮಹಾರಾಜರು, ಶಾಂತಿನಾಥ ಹೊತಪೇಟಿ, ವಿಮಲ ತಾಳಿಕೋಟಿ, ಇತರರು ಇದ್ದರು.