ಜಿಲ್ಲೆ

ಕೊಡಗು ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್ ಬಿಡುಗಡೆ

ಸುನಿಲ್ ಪೊನ್ನೇಟಿ

ಭಾಗಮಂಡಲ:

ಕೊಡಗು ಪ್ರವಾಸೋದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ ಸೈಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಿಡುಗಡೆ ಮಾಡಿದರು. ಕೊಡಗಿನ ಸುಂದರ ಪ್ರವಾಸಿ ತಾಣಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಲು ಮೀಸಲಾಗಿರುವ ಸಮಗ್ರ ಆನ್‌ಲೈನ್ ವೇದಿಕೆ ಇದಾಗಿದ್ದು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ, ವಿಶ್ವಾಸಾರ್ಹ ಪ್ರಯಾಣ ಅನುಭವವನ್ನು ಖಚಿತಪಡಿಸಿಕೊಳ್ಳಲು ಅಧಿಕೃತವಾಗಿ ನೋಂದಾಯಿತ ಮತ್ತು ಪ್ರಮಾಣೀಕೃತ ಹೋಂಸ್ಟೇಗಳು, ರೆಸಾರ್ಟ್ಗಳು, ರೆಸ್ಟೋರೆಂಟ್‌ಗಳು, ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿ ನಿರ್ವಾಹಕರು ಹಾಗೂ ಜಿಲ್ಲೆಯ ಅಧೀಕೃತ ಕಾರ್ಯಕ್ರಮಗಳನ್ನು ಇದರಲ್ಲಿ ಪಟ್ಟಿ ಮಾಡಲಾಗಿದೆ.

ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಮಾಣೀಕರಿಸಿದ ರೆಸ್ಟೋರೆಂಟ್‌ಗಳ ವಿವರ, ಪ್ರವಾಸೋದ್ಯಮ ನೀತಿ 2025-29 ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ 778 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಗುರುತಿಸಿದ 23 ಪ್ರವಾಸಿ ತಾಣಗಳು, ಕೊಡಗು ಜಿಲ್ಲೆಯಲ್ಲಿ ಭೇಟಿ ನೀಡಬೇಕಾದ ಪ್ರವಾಸಿ ತಾಣಗಳ ಬಗ್ಗೆ ಅಮೂಲ್ಯವಾದ ಮಾಹಿತಿ ಸೇರಿದಂತೆ ಪ್ರಯಾಣಿಕರು ತಮ್ಮ ಪ್ರವಾಸ ಆಯೋಜಿಸಲು ಅಗತ್ಯವಿರುವ ಎಲ್ಲಾ ವಿವರಗಳನ್ನು ಈ ವೆಬ್ ಸೈಟ್ ಒಳಗೊಂಡಿದೆ.

ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ಜಿಲ್ಲೆಯ ಪ್ರವಾಸಿ ತಾಣಗಳ ಐತಿಹಾಸಿಕ, ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಕಲಾವೈವಿಧ್ಯತೆಗಳನ್ನು ಒಳಗೊಂಡ ಚಟುವಟಿಕೆಗಳು ಬಗ್ಗೆಯೂ ಸಂಪೂರ್ಣ ಮಾಹಿತಿ, ದೇಶ, ವಿದೇಶಿ ಪ್ರವಾಸಿಗರಿಗೆ ನೀಡಲು ಒಂದು ರಾಜ್ಯ-ಹಲವು ವಿಸ್ಮಯಗಳು ಎಂಬ ವಿಷಯ ಪರಿಚಯಿಸುವುದರ ಮೂಲಕ ಜಿಲ್ಲೆಯ ಸಮಗ್ರತೆಯ ಬಗ್ಗೆ ವಿವಿಧ ಆಯಾಮಗಳ ಮೂಲಕ ಪ್ರವಾಸಿಗರನ್ನು ಕೊಡಗು ಜಿಲ್ಲೆಗೆ ಸೆಳೆಯಲು ಸ್ಥಳೀಯ ಪ್ರವಾಸಿ ಸಂಪನ್ಮೂಲಗಳ ಬಗ್ಗೆ ಜ್ಞಾನ ಮತ್ತು ಅನುಭವವಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರವಾಸೋದ್ಯಮ ಕೇಂದ್ರ ಕಚೇರಿಯಿಂದ ತರಬೇತಿ ನೀಡಲಾಗಿದ್ದು. ಇಂತ ಪ್ರವಾಸಿ ಮಾರ್ಗದರ್ಶಿಗಳ ಪಟ್ಟಿಯೂ ಇಲ್ಲಿ ಲಭ್ಯವಿದೆ.

ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಾರಿಗೆ ಆಯ್ಕೆಗಳನ್ನು ನೀಡುವ ಪ್ರಯಾಣ ಮಾರ್ಗಸೂಚಿಗಳನ್ನು ಪಾಲಿಸುವ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿರುವ ಅನುಮೋದಿತ ಟೂರ್ ಅಂಡ್ ಟ್ರಾವೆಲ್ ಆಪರೇಟರ್ಗಳ ವಿವರಗಳೂ ಇಲ್ಲಿದೆ. ಕೊಡಗು ಜಿಲ್ಲಾಧಿಕಾರಿ ಅನುಮೋದಿಸಲಾದ ಅಧಿಕೃತ ವಿಷಯಗಳು ಮಾತ್ರ ಈ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದರಿಂದ ಕಾನೂನು ಬದ್ಧತೆ ಮತ್ತು ಗುಣಮಟ್ಟದ ಖಾತರಿ ನೀಡುತ್ತದೆ.

ಜಿಲ್ಲೆಯ ಹೋಂಸ್ಟೇಗಳು, ರೆಸಾರ್ಟ್ಗಳು, ರೆಸ್ಟೋರೆಂಟ್‌ಗಳು, ಹಾಗೂ ಇತರೆ ಪ್ರವಾಸೋದ್ಯಮಗಳ ಮಾಲೀಕರ ಫೋಟೋ, ಫೋನ್ ನಂಬರ್ ಸೇರಿ ಇತರ ಅಗತ್ಯ ವಿವರಗಳನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬದಲಾವಣೆಗಳನ್ನು ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸುವ ಮೊದಲು ಇಲಾಖೆಯಿಂದ ಪರಿಶೀಲಿಸಿ ವಿವರಗಳನ್ನು ಅನುಮೋದನೆಗೊಳಿಸಲಾಗುತ್ತದೆ. ಕೊಡಗಿನ ಪ್ರವಾಸಿಗರು ಮತ್ತು ಸ್ಥಳೀಯ ವ್ಯವಹಾರಗಳಿಗೆ ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸುಸಂಘಟಿತ ಸಂಪನ್ಮೂಲವನ್ನು ಒದಗಿಸುವ ಗುರಿಯನ್ನು ಈ ವೆಬ್‌ಸೈಟ್ ಹೊಂದಿದೆ, ಎಲ್ಲಾ ಪ್ರಯಾಣಿಕರಿಗೆ ಆನಂದದಾಯಕ ಮತ್ತು ಸುರಕ್ಷಿತ ಭೇಟಿಯನ್ನು ಖಚಿತಪಡಿಸಿಕೊಳ್ಳುವಾಗ ಸುಸ್ಥಿರ, ಜವಾಬ್ದಾರಿಯುತ ಹಾಗೂ ಪರಿಸರ ಪ್ರವಾಸೋದ್ಯಮ ವ್ಯವಸ್ಥೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದ್ದಾರೆ.